ಓಟದ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ 14 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು
ಆಲಿಗಢ: ತನ್ನ ಶಾಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಭ್ಯಾಸನಿರತನಾಗಿದ್ದ 14 ವರ್ಷದ ಬಾಲಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ತನ್ನ ಶಾಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಗಾಗಿ ಪೂರ್ವಾಭ್ಯಾಸ ನಡೆಸುತ್ತಿದ್ದ ಸಿರೌಲಿ ಗ್ರಾಮದ ಮೋಹಿತ್ ಚೌಧರಿ ಎಂಬ ಬಾಲಕ ತನ್ನ ಸ್ನೇಹಿತಗೊಂದಿಗೆ ಮೊದಲು ಎರಡು ಸುತ್ತ ಓಟದ ಅಭ್ಯಾಸ ನಡೆಸಿದ್ದ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದು ಬಿದ್ದ ಎಂದು ಹೇಳಲಾಗಿದೆ.
ಈ ಕುರಿತು ಬಾಲಕನ ಸ್ನೇಹಿತರು ಆತನ ಪೋಷಕರಿಗೆ ಮಾಹಿತಿ ನೀಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಬಾಲಕನ ಶಾಲೆಯಲ್ಲಿ ಡಿಸೆಂಬರ್ 7ರಂದು ಓಟದ ಸ್ಪರ್ಧೆ ಆಯೋಜನೆಗೊಂಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮೃತ ಬಾಲಕನ ತಂದೆ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ.
ಇಂತಹುದೇ ಘಟನೆಯೊಂದರಲ್ಲಿ 20 ವರ್ಷದ ಮಮತಾ ಎಂಬ ಯುವತಿ ಕಳೆದ ತಿಂಗಳು ಮೃತಪಟ್ಟಿದ್ದಳು. ಆಲಿಗಢದ ಅರ್ರಾನ ಗ್ರಾಮದಲ್ಲಿ ಓಡುವಾಗ ಮಮತಾ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಳು. ಆಲಿಗಢದಲ್ಲಿ ಕಳೆದ 25 ದಿನಗಳಲ್ಲಿ ಮೂವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.