ಪಾಕ್ ಸೇನೆಯಿಂದ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ: BSF ಸಿಬ್ಬಂದಿಗೆ ಗಾಯ; ವರದಿ
ಹೊಸದಿಲ್ಲಿ: ಜಮ್ಮು-ಕಾಶ್ಮೀರ: ಜಮ್ಮುವಿನ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದು, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.
ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ. ಆದರೆ ತಕ್ಷಣಕ್ಕೆ ಅಲ್ಲಿನ ಯಾವುದೇ ಸಾವು-ನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿಯ ನಂತರ ಅಂತರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಉದ್ದಕ್ಕೂ ಭಾರತೀಯ ಸೈನಿಕರು ಹೈ ಅಲರ್ಟ್ ಆಗಿದ್ದಾರೆ.
ಬೆಳಿಗ್ಗೆ 2.35ರ ಸುಮಾರಿಗೆ ಅಖ್ನೂರ್ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಬಿಎಸ್ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷಗಳ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದ ಚುನಾವಣೆಗಳು ಸೆ. 18 ರಂದು ಪ್ರಾರಂಭವಾಗಲಿದ್ದು, ಎರಡನೇ ಮತ್ತು ಮೂರನೇ ಹಂತದ ಚುನಾವಣೆ ಕ್ರಮವಾಗಿ ಸೆ.25 ಮತ್ತು ಅ. 1ರಂದು ನಡೆಯಲಿವೆ.