ಅಕ್ಟೋಬರ್‌ನಲ್ಲಿ ಬಿಎಸ್ಎನ್ಎಲ್ 4ಜಿ ಸೇವೆ ಆರಂಭ?

Update: 2024-08-19 14:38 GMT

ಹೊಸದಿಲ್ಲಿ : ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿ.(ಬಿ ಎಸ್ ಎನ್ ಎಲ್) ಶೀಘ್ರವೇ ದೇಶಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ. ಅದು ಈಗಾಗಲೇ ಎಲ್ಲ ವಲಯಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ಪೂರ್ಣಗೊಳಿಸಿದೆ.

ಹಿರಿಯ ಅಧಿಕಾರಿಯೋರ್ವರ ಪ್ರಕಾರ ಪ್ರಾಯೋಗಿಕ ಫಲಿತಾಂಶಗಳು ಸಾಕಷ್ಟು ತೃಪ್ತಿಕರವಾಗಿರುವುದರಿಂದ ಬಿ ಎಸ್ ಎನ್ ಎಲ್ ತನ್ನ ಬಹುನಿರೀಕ್ಷಿತ 4ಜಿ ಸೇವೆಗಳನ್ನು ಈ ವರ್ಷದ ಅಕ್ಟೋಬರ್ನಲ್ಲಿ ಆರಂಭಿಸಬಹುದು. ಅದು ಈವರೆಗೆ ದೇಶಾದ್ಯಂತ ಸುಮಾರು 25,000 4ಜಿ ಟವರ್ಗಳನ್ನು ಸ್ಥಾಪಿಸಿದೆ. ತನ್ನ ಗ್ರಾಹಕರಿಗೆ 4ಜಿ ಸಿಮ್‌ ಗಳ ರವಾನೆಯನ್ನು ಆರಂಭಿಸಿದೆ.

ರಿಲಯನ್ಸ್ ಜಿಯೊ, ವೊಡಾಫೋನ್ ಮತ್ತು ಏರ್ ಟೆಲ್ ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ 5ಜಿ ಸೇವೆಗಳನ್ನು ಆರಂಭಿಸುತ್ತಿರುವಾಗ ಬಿ ಎಸ್ ಎನ್ ಎಲ್ ಈಗಲೂ ಪ್ರಾಥಮಿಕವಾಗಿ 2ಜಿ ಮತ್ತು 3ಜಿ ನೆಟ್ವರ್ಕಿ ಗಳನ್ನು ನೀಡುತ್ತಿದೆ. ಪರಿಣಾಮವಾಗಿ ಅದರ ಗ್ರಾಹಕರು ಖಾಸಗಿ ಕಂಪನಿಗಳ ಪಾಲಾಗುತ್ತಿದ್ದಾರೆ. ಕಳೆದ ವಿತ್ತ ವರ್ಷದಲ್ಲಿ ಅದು 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದ್ದು, ಅದರ ಗ್ರಾಹಕರ ಸಂಖ್ಯೆ 8,80,60,000ಕ್ಕೆ ಕುಸಿದಿದೆ. ಅದರ ಮಾರುಕಟ್ಟೆ ಪಾಲು ಕೂಡ ಎಪ್ರಿಲ್ 2024ರಲ್ಲಿ ಶೇ.7.46ಕ್ಕೆ ಇಳಿಕೆಯಾಗಿದ್ದರೆ ಪ್ರತಿಸ್ಪರ್ಧಿಗಳಾಗಿರುವ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಬುನಾದಿಯನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುತ್ತಿವೆ

ಸ್ಥಳೀಯ ನೆಟ್ವರ್ಕ್ ಅಥವಾ ಭಾರತದ ಸ್ವಂತ 4ಜಿ ತಂತ್ರಜ್ಞಾನವನ್ನು ಬಳಸಬೇಕು ಎಂದು ಬಿಎಸ್ಎನ್ಎಲ್ಗೆ ಸರಕಾರದ ನಿರ್ದೇಶನವು ಅದು 4ಜಿ ಸೇವೆಗಳನ್ನು ಆರಂಭಿಸುವಲ್ಲಿ ವಿಳಂಬಕ್ಕೆ ಕಾರಣವಾಗಿದೆ.

ಟಾಟಾ ಗ್ರೂಪ್ ನೇತೃತ್ವದ ಒಕ್ಕೂಟವು ದೇಶಾದ್ಯಂತ 4ಜಿ ಸೈಟ್ಗಳನ್ನು ಸ್ಥಾಪಿಸಲು ಮೇ 2023ರಲ್ಲಿ ಬಿ ಎಸ್ ಎನ್ ಎಲ್ ನಿಂದ 15,000 ಕೋಟಿ ರೂ.ಗಳ ಬೇಡಿಕೆಯನ್ನು ಪಡೆದುಕೊಂಡಿದ್ದು, ತೇಜಸ್ ನೆಟ್ವರ್ಕ್ ಮತ್ತು ಸರಕಾರಿ ಬೆಂಬಲಿತ ಸಿ-ಡಾಟ್ ಅಗತ್ಯ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಒದಗಿಸುತ್ತಿವೆ.

ಬಿ ಎಸ್ ಎನ್ ಎಲ್ ಪಂಜಾಬಿನಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಸಿ-ಡಾಟ್ ನೇತೃತ್ವದ ಒಕ್ಕೂಟ ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು 4ಜಿ ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಅಲ್ಲಿ ಸುಮಾರು ಎಂಟು ಲಕ್ಷ ಚಂದಾದಾರರನ್ನು ಹೊಂದಿದೆ. ಕಂಪನಿಯು ಪ್ರಸ್ತುತ ಭಾರತದಾದ್ಯಂತ 4ಜಿ ಮತ್ತು 5ಜಿ ಸೇವೆಗಳಿಗಾಗಿ ಒಂದು ಲಕ್ಷ ಟವರ್ಗಳನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News