ಬಜೆಟ್ 2024| ಬಾಹ್ಯಾಕಾಶ ಕ್ಷೇತ್ರ ಅಭಿವೃದ್ಧಿಗೆ 1,000 ಕೋಟಿ ರೂ. ನಿಧಿ ಸ್ಥಾಪನೆ
ಹೊಸದಿಲ್ಲಿ: ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು 1,000 ಕೋಟಿ ರೂಪಾಯಿ ಮೊತ್ತದ ನಿಧಿಯನ್ನು ಸರಕಾರ ಸ್ಥಾಪಿಸಲಿದೆ ಎಂದು ತನ್ನ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ.
‘‘ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯನ್ನು ಐದು ಪಟ್ಟು ವಿಸ್ತರಿಸುವ ನಮ್ಮ ಉದ್ದೇಶಕ್ಕೆ ಅನುಗುಣವಾಗಿ 1,000 ಕೋಟಿ ರೂಪಾಯಿ ಮೌಲ್ಯದ ನಿಧಿಯನ್ನು ಸ್ಥಾಪಿಸಲಾಗುವುದು’’ ಎಂದು ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಲೋಕಸಭೆಯಲ್ಲಿ ಹೇಳಿದರು.
ಈ ಪ್ರಸ್ತಾವವನ್ನು ಭಾರತೀಯ ಬಾಹ್ಯಾಕಾಶ ಅಸೋಸಿಯೇಶನ್ (ಐಎಸ್‌ಪಿಎ), ಇಂಡಿಯನ್ ನ್ಯಾಶನಲ್ ಸ್ಪೇಸ್ ಪ್ರೊಮೋಶನ್ ಆ್ಯಂಡ್ ಆತರೈಸೇಶನ್ ಸೆಂಟರ್ (ಇನ್-ಸ್ಪೇಸ್) ಮತ್ತು ಪಿಕ್ಸೆಲ್ ಸ್ಪೇಸ್ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಭಾಗೀದಾರರು ಮುಕ್ತಕಂಠದಿAದ ಪ್ರಶಂಸಿಸಿದ್ದಾರೆ. 2024-25ರ ಬಜೆಟ್‌ನಲ್ಲಿ ಒದಗಿಸಲಾಗಿರುವ ನಿಧಿಯು ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.