ಸಿಎಎ ಮಾನವೀಯತೆಗೆ ಸವಾಲು, ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರಂ: ಲೋಕಸಭಾ ಚುನಾವಣೆ ನಡೆಯಲು ಇನ್ನೇನು ಕೆಲವೇ ವಾರಗಳಿವೆಯೆನ್ನುವಾಗ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ವಿವಾದಿತ ಸಿಎಎ ನಿಯಮಾವಳಿಗಳನ್ನು ಘೋಷಿಸಿ ಈ ಕಾನೂನಿನ ಜಾರಿಗೆ ಮುಂದಾಗಿರುವ ಕ್ರಮವು ಜನರ ಕೋಮುಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದೆ ಹಾಗೂ ಸಂವಿಧಾನದ ಮೂಲ ತತ್ವಗಳ ವಿರುದ್ಧವಾಗಿದೆ ಎಂದು ಹೇಳಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮ್ಮ ಸರ್ಕಾರ ಈ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾರೆ.
ಕೇಂದ್ರದ ಈ ಕ್ರಮ ದೇಶದಲ್ಲಿ ಸಮಸ್ಯೆ ಸೃಷ್ಟಿಸಬಹುದು ಎಂದು ಎಚ್ಚರಿಸಿದ ಪಿಣರಾಯಿ ವಿಜಯನ್, ವಿಪಕ್ಷಗಳು ಒಗ್ಗಟ್ಟಿನಿಂದ ಕೇಂದ್ರದ ಕ್ರಮವನ್ನು ವಿರೋಧಿಸಬೇಕು ಎಂದಿದ್ದಾರೆ.
“ಇದು ಸಂಘ ಪರಿವಾರದ ಹಿಂದುತ್ವ ಮತೀಯವಾದ ಅಜೆಂಡಾ ಆಗಿದೆ. ಡಿಸೆಂಬರ್ 31, 2014ಕ್ಕಿಂತ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ವಲಸೆ ಬಂದ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಹಾಗೂ ಮುಸ್ಲಿಮರನ್ನು ಈ ಕಾಯಿದೆ ವ್ಯಾಪ್ತಿಯಿಂದ ಹೊರಗಿಡುವ ಕ್ರಮ ಸಂವಿಧಾನದ ಉಲ್ಲಂಘನೆಯಾಗಿದೆ. ಭಾರತದ ಪೌರತ್ವವನ್ನು ಧರ್ಮದ ಆಧಾರದಲ್ಲಿ ವ್ಯಾಖ್ಯಾನಿಸಲಾಗಿದೆ. ಇದು ಮಾನವೀಯತೆಗೆ, ದೇಶದ ಸಂಪ್ರದಾಯಗಳು ಮತ್ತು ಜನರಿಗೆ ಬಹಿರಂಗ ಸವಾಲಾಗಿದೆ,” ಎಂದು ಪಿಣರಾಯಿ ಹೇಳಿದ್ದಾರೆ.