2010ರ ನಂತರ ಪಶ್ಚಿಮ ಬಂಗಾಳದಲ್ಲಿ ವಿತರಣೆಯಾಗಿರುವ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

Update: 2024-05-22 16:39 GMT

ಕಲ್ಕತ್ತಾ ಹೈಕೋರ್ಟ್ | PC: NDTV

ಕೋಲ್ಕತ್ತಾ: 2010ರ ನಂತರ ಪಶ್ಚಿಮ ಬಂಗಾಳದಲ್ಲಿ ವಿತರಿಸಲಾಗಿರುವ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರಗಳನ್ನು ಬುಧವಾರ ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ಕಾಯ್ದೆಯನ್ವಯ ಈಗಾಗಲೇ ಉದ್ಯೋಗ ಪಡೆದಿರುವವರು ಹಾಗೂ ಇಂತಹ ಮೀಸಲಾತಿಯ ಕಾರಣಕ್ಕೆ ಈಗಾಗಲೇ ಸೇವೆಯಲ್ಲಿರುವವರಿಗೆ ಈ ಆದೇಶದಿಂದ ಯಾವುದೇ ಪರಿಣಾಮವುಂಟಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾ. ತಪಬ್ರತ ಚಕ್ರಬೊರ್ತಿ ಹಾಗೂ ನ್ಯಾ.ರಾಜಶೇಖರ್ ಮಂತ ಅವರನ್ನೊಳಗೊಂಡಿದ್ದ ವಿಭಾಗೀಯ ನ್ಯಾಯಪೀಠವು, ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರವನ್ನು ವಿತರಿಸಲು ಅನುಸರಿಸುತ್ತಿರುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಿದೆ. ಈ ಆದೇಶದಿಂದ ಸುಮಾರು 5 ಲಕ್ಷ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರಗಳಿಗೆ ಕುತ್ತುಂಟಾಗಲಿದೆ.

2010ರ ನಂತರ ರಾಜ್ಯದಲ್ಲಿ ವಿತರಿಸಲಾಗಿರುವ ಎಲ್ಲ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರಗಳನ್ನು ರದ್ದುಗೊಳಿಸುವ ನ್ಯಾಯಾಲಯದ ತೀರ್ಪಿನಿಂದ 2011ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಈ ತೀರ್ಪಿನಿಂದಾಗಿ ಹಾಲಿ ಆಡಳಿತರೂಢ ಸರಕಾರದ ಅವಧಿಯಲ್ಲಿ ಹಂಚಿಕೆಯಾಗಿರುವ ಬಹುತೇಕ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರಗಳು ಅನೂರ್ಜಿತಗೊಳ್ಳಲಿವೆ.

ಇತರೆ ಹಿಂದುಳಿದ ವರ್ಗಗಳಿಗೆ ಸೇರಿರುವ ಅಭ್ಯರ್ಥಿಗಳಿಗೆ ಸರಕಾರಿ ಕಚೇರಿಗಳಲ್ಲಿ ಮೀಸಲಾತಿಯನ್ನು ಒದಗಿಸುವ ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) ಸೇವೆಗಳು ಹಾಗೂ ಪದವಿಗಳ ಖಾಲಿ ಹುದ್ದೆಗಳಲ್ಲಿ ಮೀಸಲಾತಿ ಕಾಯ್ದೆ, 2012 ಅನ್ನು ಪ್ರಶ್ನಿ ಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News