370ನೇ ವಿಧಿ ರದ್ದತಿಯನ್ನು ಕರಾಳ ದಿನವೆಂದು ಕರೆದದ್ದು ಅಪರಾಧವಲ್ಲ: ಸುಪ್ರೀಂಕೋರ್ಟ್

Update: 2024-03-08 06:14 GMT

ಹೊಸದಿಲ್ಲಿ: ಭಿನ್ನಾಭಿಪ್ರಾಯವನ್ನು ಕಾನೂನುಬದ್ಧವಾಗಿ ಅಭಿವ್ಯಕ್ತಪಡಿಸುವುದು ಜೀವನದ ಹಕ್ಕಿನ ಒಂದು ಭಾಗ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯನ್ನು ಕರಾಳ ದಿನವೆಂದು ಕರೆದದ್ದು ಅಪರಾಧವಲ್ಲ ಎಂದು ಹೇಳಿದೆ. ಅಂತೆಯೇ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸುವುದು ಕೂಡಾ ಭಾರತೀಯ ದಂಡಸಂಹಿತೆ ಸೆಕ್ಷನ್ 153ಎ ಅಡಿಯಲ್ಲಿ ಉಭಯ ದೇಶಗಳ ಗುಂಪುಗಳ ನಡುವೆ ಅಥವಾ ಧಾರ್ಮಿಕ ನೆಲೆಯಲ್ಲಿ ದ್ವೇಷಕ್ಕೆ ಕಾರಣವಾಗುವ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ.

370ನೇ ವಿಧಿ ರದ್ದತಿಯನ್ನು ಮತ್ತು ಜಮ್ಮು & ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಿದ ನಿರ್ಧಾರವನ್ನು ಟೀಕಿಸುವ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಈ ರದ್ದತಿ ದಿನವನ್ನು ಕರಾಳದಿನ ಎಂದು ಕರೆದಿರುವುದು ಪ್ರತಿಭಟನೆ ಮತ್ತು ಸಿಟ್ಟನ್ನು ಅಭಿವ್ಯಕ್ತಪಡಿಸುವ ಕ್ರಮ. ಸರ್ಕಾರದ ಪ್ರತಿಯೊಂದು ಕ್ರಮದ ಬಗ್ಗೆ ಟೀಕಿಸುವುದು ಅಥವಾ ಪ್ರತಿಭಟಿಸುವುದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧವಾದರೆ, ಸಂವಿಧಾನದ ಅಗತ್ಯ ವಿಶೇಷತೆ ಎನಿಸಿರುವ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಜತೆಗೆ 370ನೇ ವಿಧಿ ರದ್ದತಿಯನ್ನು ಟೀಕಿಸಿದ್ದ ಬಾರಮುಲ್ಲಾ ನಿವಾಸಿ ಜಾವೇದ್ ಅಹ್ಮದ್ ಹಜಾಮ ವಿರುದ್ಧದ ಎಫ್‍ಐಆರ್ ರದ್ದುಪಡಿಸಿದೆ.

"ಕಾನೂನುಬದ್ಧವಾಗಿ ಭಿನ್ನಾಭಿಪ್ರಾಯವನ್ನು ಅಭಿವ್ಯಕ್ತಪಡಿಸುವುದನ್ನು ಸಂವಿಧಾನದ 21ನೇ ವಿಧಿಯಡಿ ನೀಡಿರುವ ಘನತೆಯಿಂದ ಮತ್ತು ಅರ್ಥಪೂರ್ಣವಾಗಿ ಬಾಳ್ವೆ ನಡೆಸುವ ಹಕ್ಕಿನ ಭಾಗ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳನ್ನು ಟೀಕಿಸುವ ಕ್ರಮದ ವಿರುದ್ಧ ಈ ಹಿಂದೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್, 370ನೇ ವಿಧಿ ರದ್ದತಿಯನ್ನು ಟೀಕಿಸಿದ ಹಜಾಮ್ ಅವರ ವಿಚಾರದಲ್ಲಿ ವಿಸ್ತೃತವಾದ ದೃಷ್ಟಿಕೋನವನ್ನು ಹೊಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ಕಾರದ ಪ್ರತಿಯೊಂದು ಕ್ರಮವನ್ನು ಟೀಕಿಸುವ ನಾಗರಿಕರ ಹಕ್ಕಿನ ಬಗ್ಗೆ ಪೊಲೀಸರಿಗೆ ತಿಳಿಹೇಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News