ಪಿಎಂ ಕೇರ್ಸ್ ನ ಪ್ರಯೋಜನಗಳನ್ನು ಎಲ್ಲ ಅನಾಥ ಮಕ್ಕಳಿಗೂ ವಿಸ್ತರಿಸಲು ಸಾಧ್ಯವೇ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2023-09-16 16:13 GMT

ಸುಪ್ರೀಂ ಕೋರ್ಟ್| Photo: PTI 

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿಯಡಿ ನೀಡಲಾಗುತ್ತಿರುವ ಪ್ರಯೋಜನಗಳನ್ನು ಹೆತ್ತವರಿಲ್ಲದ ಎಲ್ಲ ಅನಾಥ ಮಕ್ಕಳಿಗೂ ವಿಸ್ತರಿಸಬಹುದೇ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದೆ.

‘ಕೋವಿಡ್ ಸಾಂಕ್ರಾಮಿಕದಿಂದಾಗಿ ಅನಾಥರಾಗಿರುವ ಮಕ್ಕಳಿಗಾಗಿ ಸರಿಯಾದ ನೀತಿಯನ್ನು ನೀವು ತಂದಿದ್ದೀರಿ. ನೀವು ಈಗ ಅದನ್ನು ಪ್ರತಿಯೊಬ್ಬ ಅನಾಥ ಮಕ್ಕಳಿಗೂ ವಿಸ್ತರಿಸಬೇಕು. ಹೆತ್ತವರು ರಸ್ತೆ ಅಪಘಾತದಲ್ಲಿ ಅಥವಾ ಅನಾರೋಗ್ಯದಿಂದಾಗಿ ಅಥವಾ ಇತರ ಯಾವುದೇ ಕಾರಣದಿಂದ ನಿಧನರಾಗಿರಲಿ, ಅನಾಥ ಮಕ್ಕಳು ಅನಾಥರೇ. ನೀವು ಪರಿಸ್ಥಿತಿಯಿಂದಾಗಿ ಇಲ್ಲಿ ಹಾಜರಾಗಿದ್ದೀರಿ, ಪೋಷಕತ್ವಕ್ಕಾಗಿ ಅಲ್ಲ ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಹೇಳಿದರು.

ಮೂವರು ನ್ಯಾಯಾಧೀಶರ ಪೀಠವು ಪೌಲೋಮಿ ಪವಿನಿ ಶುಕ್ಲಾ 2018ರಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದಾಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿತ್ತು.

‘ಕಳೆದ ಐದು ವರ್ಷಗಳಿಂದಲೂ ಈ ಅರ್ಜಿಯು ಬಾಕಿಯುಳಿದಿದೆ. ನಾನು ವಿದ್ಯಾರ್ಥಿನಿಯಾಗಿದ್ದಾಗ ಅದನ್ನು ಸಲ್ಲಿಸಿದ್ದೆ. ಈಗ ನಾನು ಕಾನೂನು ವ್ಯಾಸಂಗವನ್ನು ಪೂರ್ಣಗೊಳಿಸಿದ್ದೇನೆ ಮತ್ತು ಮದುವೆಯಾಗಿದ್ದೇನೆ ’ ಎಂದು ಶುಕ್ಲಾ ನಿವೇದಿಸಿಕೊಂಡಾಗ, ‘ಸರಕಾರವು ಏನು ಮಾಡಲು ಯೋಜಿಸುತ್ತಿದೆ ಎನ್ನುವುದನ್ನು ನಾವು ನೋಡುತ್ತೇವೆ ’ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು.

ಇಡಬ್ಲ್ಯುಎಸ್ ಕೋಟಾ

ಖಾಸಗಿ ಶಾಲೆಗಳಿಗೆ ಪ್ರವೇಶದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)ಗಳಿಗೆ ನೀಡಲಾಗಿರುವ ಶೇ.20 ಮೀಸಲಾತಿಗೆ ಅನಾಥ ಮಕ್ಕಳನ್ನೂ ಅರ್ಹರನ್ನಾಗಿಸಬೇಕು ಎಂದು ಪ್ರಕರಣದಲ್ಲಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದರು.

ಸರಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಆದೇಶಿಸಿರುವ ಶಿಕ್ಷಣ ಹಕ್ಕು ಕಾಯ್ದೆಯಡಿ ‘ಸೌಲಭ್ಯ ವಂಚಿತ ಗುಂಪುಗಳಿಗೆ ಸೇರಿದ ಮಕ್ಕಳ ’ವರ್ಗದಲ್ಲಿ ಅನಾಥರನ್ನು, ವಿಶೇಷವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಸ್ಥಿತಿಗಳಿಗೆ ಸೇರಿದವರನ್ನು ಸೇರ್ಪಡೆಗೊಳಿಸಬಹುದು ಎಂದು ನ್ಯಾಯಾಲಯವು ಹೇಳಿತು.

ರಾಜ್ಯಗಳು ಸರಳವಾಗಿ ಅಧಿಸೂಚನೆಯೊಂದನ್ನು ಹೊರಡಿಸುವ ಮೂಲಕ ಈ ಗುರಿಯನ್ನು ಸಾಧಿಸಬಹುದು ಎಂದು ಹೇಳಿದ ಶುಕ್ಲಾ,ಗುಜರಾತ್ ಮತ್ತು ದಿಲ್ಲಿ ಸರಕಾರಗಳು ಈಗಾಗಲೇ ಹಾಗೆ ಮಾಡಿವೆ. ಗುಜರಾತ್ ಮತ್ತು ದಿಲ್ಲಿಯಲ್ಲಿಯ ಎಲ್ಲ ಮಕ್ಕಳು ಈ ಸವಲತ್ತುಗಳನ್ನು ಪಡೆಯಬಹುದಾದರೆ ಇತರ ರಾಜ್ಯಗಳ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಬಳಿಕ ನಿಗದಿಗೊಳಿಸಿದ ನ್ಯಾಯಾಲಯವು ಈ ವಿಷಯದಲ್ಲಿಯೂ ತಮ್ಮ ಪ್ರತ್ಯೇಕ ಅಫಿಡವಿಟ್ ಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News