ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪದ ಆರೋಪ ತಿರಸ್ಕರಿಸಿದ ಭಾರತ
![ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪದ ಆರೋಪ ತಿರಸ್ಕರಿಸಿದ ಭಾರತ Photo of Justin Trudeau and Narendra Modi](https://www.varthabharati.in/h-upload/2025/01/29/1500x900_1318769-ddsdsds.webp)
ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ / ಭಾರತದ ಪ್ರಧಾನಿ ನರೇಂದ್ರ ಮೋದಿ (Photo credit: AP)
ಹೊಸದಿಲ್ಲಿ : ಕೆನಡಾ ಚುನಾವಣೆಯಲ್ಲಿ ಭಾರತ ಸರ್ಕಾರ ಹಸ್ತಕ್ಷೇಪ ನಡೆಸಿದೆ ಎಂಬ ಕೆನಡಾದ ಅಧಿಕೃತ ವರದಿಯನ್ನು ಭಾರತ ತಿರಸ್ಕರಿಸಿದ್ದು, ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಕೆನಡಾವನ್ನು ದೂಷಿಸಿದೆ.
ಕೆನಡಾ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದಲ್ಲಿ ಭಾರತ ತೊಡಗಿದ್ದು, ಚೀನಾದ ನಂತರ ಭಾರತ ಎರಡನೇ ಅತ್ಯಂತ ಸಕ್ರಿಯ ರಾಷ್ಟ್ರವಾಗಿದೆ ಎಂದು ಕೆನಡಾದ ಅಧಿಕೃತ ವರದಿಯು ಹೇಳಿತ್ತು. ಕೆನಡಾದ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತ ಆಯೋಗದ ವರದಿಗೆ ಬಲವಾದ ಖಂಡನೆ ವ್ಯಕ್ತಪಡಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕೆನಡಾವನ್ನು ಅಕ್ರಮ ವಲಸೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ದೂಷಿಸಿದೆ.
ಕಮಿಷನರ್ ಮೇರಿ-ಜೋಸಿ ಹೊಗ್ ನೇತೃತ್ವದ ಆಯೋಗ, 2021ರ ಕೆನಡಾ ಚುನಾವಣೆ ಸಮಯದಲ್ಲಿ ಆದ್ಯತೆಯ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ನಕಲಿ ಏಜೆಂಟ್ಗಳನ್ನು ಬಳಸಲು ಭಾರತ ಸರ್ಕಾರವು ಪ್ರಯತ್ನಿಸಿರಬಹುದು ಎಂದು ಆರೋಪಿಸಿದೆ. ಭಾರತ ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ನಡೆಸಿರುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವರದಿಯು ಹೇಳಿದೆ.
ಕೆನಡಾದಲ್ಲಿ 2019 ಮತ್ತು 2021ರಲ್ಲಿ ನಡೆದ ಚುನಾವಣೆಯಲ್ಲಿ ಭಾರತ, ಚೀನಾ, ರಷ್ಯಾ ಮತ್ತು ಇತರ ದೇಶಗಳ ಸಂಭಾವ್ಯ ಹಸ್ತಕ್ಷೇಪದ ಬಗ್ಗೆ ಕೆನಡಾದ ಗುಪ್ತಚರ ಏಜೆನ್ಸಿ ಆಪಾದಿಸಿದ್ದವು. ಕೆನಡಾ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಿದೆ ಎಂಬ ಆರೋಪವನ್ನು ಭಾರತ ಸರಕಾರ ಈ ಮೊದಲೇ ತಳ್ಳಿ ಹಾಕಿತ್ತು. ಇದೊಂದು ಆಧಾರ ರಹಿತ ಆರೋಪವಾಗಿದ್ದು, ಬೇರೆ ದೇಶಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವ ನೀತಿಯನ್ನು ಭಾರತ ಹೊಂದಿಲ್ಲ. ವಾಸ್ತವದಲ್ಲಿ, ಕೆನಡಾವೇ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.