ವಿದ್ಯಾರ್ಹತೆ ಘೋಷಿಸುವಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ : ಕಲಕತ್ತಾ ಹೈಕೋರ್ಟ್
ಕೋಲ್ಕತಾ: ಅಭ್ಯರ್ಥಿಯೋರ್ವರು ತನ್ನ ಶೈಕ್ಷಣಿಕ ಅರ್ಹತೆಗಳನ್ನು ಘೋಷಿಸುವಲ್ಲಿ ಅಕ್ರಮವನ್ನೆಸಗಿದ್ದಾರೆ ಎಂಬ ಕಾರಣದಿಂದ ವಿಧಾನಸಭೆಗೆ ಅವರ ಆಯ್ಕೆಯನ್ನು ಅಸಿಂಧುಗೊಳಿಸಲಾಗುವುದಿಲ್ಲ ಎಂದು ಕಲಕತ್ತಾ ಉಚ್ಛ ನ್ಯಾಯಾಲಯವು ಶುಕ್ರವಾರ ಹೇಳಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಬನಗಾಂವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸ್ವಪನ್ ಮಜುಮ್ದಾರ್ ಅವರ ಆಯ್ಕೆಯನ್ನು ಅದು ಎತ್ತಿ ಹಿಡಿದಿದೆ.
ಅಶಿಕ್ಷಿತ ಮತದಾರರು ತಮ್ಮಲ್ಲೋರ್ವರನ್ನು ರಾಜ್ಯ ವಿಧಾನಸಭೆಯಲ್ಲಿ ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ ನ್ಯಾ.ಸವ್ಯಸಾಚಿ ಭಟ್ಟಾಚಾರ್ಯ ಅವರ ಏಕ ನ್ಯಾಯಾಧೀಶ ಪೀಠವು,ಈ ದೃಷ್ಟಿಯಿಂದ ನೋಡಿದಾಗ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದಂತೆ ಘೋಷಣೆಯಲ್ಲಿ ಕೆಲವು ಅಕ್ರಮಗಳು ನಡೆದಿದ್ದರೂ ಅದನ್ನು ಅವರ ಚುನಾವಣಾ ಆಯ್ಕೆಗೆ ಅಡ್ಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ವಿಧಾನಸಭೆಗೆ ಮಜುಮ್ದಾರ್ ಆಯ್ಕೆಯನ್ನು ಪ್ರಶ್ನಿಸಿದ್ದ ಅರ್ಜಿದಾರ ಗೋಪಾಲ ಸೇಠ್ ಆರ್‌ಟಿಐ ಕಾಯ್ದೆಯಡಿ ಪಡೆದುಕೊಂಡಿದ್ದ ದಾಖಲೆಗಳ ಆಧಾರದಲ್ಲಿ, 2021ರ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮಜುಮ್ದಾರ್ ಸುಳ್ಳು ಶೈಕ್ಷಣಿಕ ಅರ್ಹತೆಗಳನ್ನು ಘೋಷಿಸಿದ್ದರು ಎಂದು ಆರೋಪಿಸಿದ್ದರು.
ಮಜುಮ್ದಾರ್ ಅವರ ಜನ್ಮವರ್ಷವನ್ನು 1982 ಎಂದು ದಾಖಲಿಸಲಾಗಿದೆ. ಹೀಗಾಗಿ ಅವರು 1990-92ರಲ್ಲಿ ಐದನೇ ತರಗತಿಯಲ್ಲಿರಬೇಕಿತ್ತು. ಆದರೆ, ಮುಜುಮ್ದಾರ್ ಓದಿದ್ದಾರೆನ್ನಲಾಗಿರುವ ಶಾಲೆಯ ದಾಖಲೆಗಳು 1989-90 ಮತ್ತು 1995-96ರ ಶೈಕ್ಷಣಿಕ ವರ್ಷಗಳ ನಡಿವೆ ಅವರು ಅಲ್ಲಿ ವ್ಯಾಸಂಗ ಮಾಡಿದ್ದರು ಎನ್ನುವುದನ್ನು ಉಲ್ಲೇಖಿಸಿಲ್ಲ ಎಂದು ಸೇಠ್ ತನ್ನ ಅರ್ಜಿಯಲ್ಲಿ ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಭಟ್ಟಾಚಾರ್ಯ, ನಡೆದಿದೆ ಎನ್ನಲಾಗಿರುವ ಅಕ್ರಮವು ಸೂಕ್ತ ವಿಚಾರಣೆ ಮತ್ತು ಸಾಕ್ಷ್ಯಗಳ ಪರಿಶೀಲನೆಯೊಂದಿಗೆ ಕ್ರಿಮಿನಲ್ ನ್ಯಾಯಾಲಯವು ನಿರ್ಧರಿಸಬೇಕಿರುವ ವಿಷಯವಾಗಿದೆ. ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷ್ಯಗಳು ಮಜುಮ್ದಾರ್ ಅವರು ಸುಳ್ಳು ಶೈಕ್ಷಣಿಕ ಅರ್ಹತೆಗಳನ್ನು ಘೋಷಿಸಿದ್ದರು ಅಥವಾ ಚುನಾವಣಾ ಆಯೋಗವನ್ನು ವಂಚಿಸಿದ್ದರು ಎಂಬ ಗಂಭೀರ ತೀರ್ಮಾನಕ್ಕೆ ಬರಲು ಎಳ್ಳಷ್ಟೂ ಸಾಲುವುದಿಲ್ಲ ಎಂದು ಹೇಳಿದರು.
ಜನ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 36(4)ರಂತೆ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಗಣನೀಯ ಸ್ವರೂಪದ್ದಲ್ಲದ ಯಾವುದೇ ದೋಷದ ಆಧಾರದಲ್ಲಿ ಚುನಾವಣಾಧಿಕಾರಿಗಳು ನಾಮಪತ್ರವನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾ.ಭಟ್ಟಾಚಾರ್ಯ ವ್ಯಾಖ್ಯಾನಿಸಿದರು.
ಚುನಾವಣೆಯಲ್ಲಿ ಆಯ್ಕೆಯಾಗಲು ಅಗತ್ಯ ಮಾನದಂಡವಾಗಿರದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿನ ದೋಷವು ಗಣನೀಯ ಸ್ವರೂಪದ್ದಲ್ಲ ಎಂದೂ ಅವರು ಹೇಳಿದರು.