ಕೋರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ 6000 ಮರಗಳಿಗೆ ಕೊಡಲಿಯೇಟು: ತನಿಖೆ ಆರಂಭಿಸಿದ ಸಿಬಿಐ
ಡೆಹ್ರಾಡೂನ್: ಜಿಮ್ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಸಫಾರಿ ನಿರ್ಮಾಣ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆ ಆರಂಭಿಸಿದೆ. ಈ ಬಗ್ಗೆ ರಾಜ್ಯದ ವಿಚಕ್ಷಣಾ ದಳದಿಂದ ಸಿಬಿಐ ದಾಖಲೆಗಳನ್ನು ಕೇಳಿದೆ. ಇದನ್ನು ದೃಢಪಡಿಸಿರುವ ರಾಜ್ಯದ ವಿಚಕ್ಷಣಾ ವಿಭಾಗದ ನಿರ್ದೇಶಕ ಡಾ.ಮುರುಗೇಶನ್, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ದಾಖಲೆಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಮತ್ತು ಮಾಜಿ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ ಎಂಉ ಉನ್ನತ ಮೂಲಗಳು ಹೇಳಿವೆ.
ನೈನಿತಾಲ್ ಹೈಕೋರ್ಟ್ನ ಸುಚನೆ ಅನ್ವಯ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಕೋರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲಿ ಪಖ್ರೋ ಹುಲಿ ಸಫಾರಿ ನಿರ್ಮಾಣದ ಹಂತದಲ್ಲಿ ನಡೆದ ಅಕ್ರಮ ನಿರ್ಮಾಣ ಮತ್ತು 6000 ಮರಗಳನ್ನು ಅಕ್ರಮವಾಗಿ ಕಡಿದ ಪ್ರಕರಣದ ಬಗ್ಗೆ ಹೈಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದೆ. ಈ ಪ್ರಕರಣವನ್ನು ಏಕೆ ಸಿಬಿಐ ತನಿಖೆ ನಡೆಸಬಾರದು ಎಂದು ಕೋರ್ಟ್, ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಹ್ರಾಡೂನ್ ನಿವಾಸಿ ಅನು ಪಂತ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.