ರಾಹುಲ್ ಗಾಂಧಿ ಪೌರತ್ವ ವಿಚಾರದಲ್ಲಿ ಸಿಬಿಐ ತನಿಖೆ ಆರಂಭಿಸಲಾಗಿದೆ : ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ

Update: 2024-11-06 15:06 GMT

Photo:PTI

ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹು‌ಲ್ ಗಾಂಧಿ ಅವರ ಪೌರತ್ವದ ಬಗ್ಗೆ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಪಿಐಎಲ್ ಕುರಿತು ಸಿಬಿಐ ತನಿಖೆ ಆರಂಭಿಸಲಾಗಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಲಾಗಿದೆ.

ಕರ್ನಾಟಕ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದಾಗ, ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ಈ ಬಗ್ಗೆ ಯಾವುದೇ ಆದೇಶಗಳನ್ನು ಹೊರಡಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿನ ಪಿಐಎಲ್ ಗೆ ಸಂಬಂಧಿತ ಬೆಳವಣಿಗೆಗಳ ಕುರಿತು ಅಫಿಡವಿಟ್ ಸಲ್ಲಿಸಲು ಎಸ್ ವಿಘ್ನೇಶ್ ಶಿಶಿರ್ ಅವರಿಗೆ ಪೀಠವು ಇದೇ ವೇಳೆ ಹೇಳಿದೆ.

ಸಂಸದ ರಾಹುಲ್ ಗಾಂಧಿ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಅಲಹಾಬಾದ್ ಹೈಕೋರ್ಟ್‌ನಲ್ಲಿರುವ ವಿಷಯಕ್ಕೂ ತನ್ನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಮನವಿಯು ಸಂಪೂರ್ಣವಾಗಿ ವಿಭಿನ್ನವಾಗಿವೆ ಎಂದು ಸ್ವಾಮಿ ಸಮರ್ಥಿಸಿಕೊಂಡಿದ್ದರು.

ವಿಚಾರಣೆಯ ಸಂದರ್ಭದಲ್ಲಿ, ಶಿಶಿರ್ ಅವರು ತಮ್ಮ ಅರ್ಜಿಯನ್ನು ಅ.24ರಂದು ಅಲಹಾಬಾದ್ ಹೈಕೋರ್ಟ್ ಕೊನೆಯದಾಗಿ ವಿಚಾರಣೆ ನಡೆಸಿದೆ ಮತ್ತು ಈ ವಿಷಯವು ಸಿಬಿಐ ತನಿಖೆಯಲ್ಲಿದೆ ಎಂದು ಹೇಳಿದ್ದಾರೆ. ನಾನು ಈ ಪ್ರಕರಣದಲ್ಲಿ ಸಿಬಿಐ ಮುಂದೆ ಹಾಜರಾಗಿದ್ದೇನೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅತ್ಯಂತ ಗೌಪ್ಯ ಸಾಕ್ಷ್ಯವನ್ನು ನೀಡಿದ್ದೇನೆ. ಈ ವಿಷಯವು ಪ್ರಸ್ತುತ ಸಿಬಿಐ ತನಿಖೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರೇ ತಾನು ಬ್ರಿಟನ್ ಪ್ರಜೆ ಹಾಗೂ ಬ್ರಿಟಿಷ್ ಪಾಸ್ಪೋರ್ಟ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಸಂವಿಧಾನದ 9ನೇ ವಿಧಿಗೆ ವಿರುದ್ಧವಾದದ್ದು. ಹೀಗಾಗಿ ಅವರ ಭಾರತೀಯ ಪೌರತ್ವವನ್ನು ರದ್ದುಪಡಿಸಬೇಕು ಎಂದು ಗೃಹ ಸಚಿವಾಲಯಕ್ಕೆ 2019ರ ಆ.6ರಂದು ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದರು.

ಗಾಂಧಿಯವರ ಬ್ರಿಟಿಷ್ ಪೌರತ್ವದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಕರ್ನಾಟಕ ಬಿಜೆಪಿ ನಾಯಕ ವಿಘ್ನೇಶ್ ಶಿಶಿರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News