ರೈಲ್ವೆ ಉದ್ಯೋಗಿಗಳಿಗೆ ತುಟ್ಟಿಭತ್ತೆ ಶೇ.4ರಷ್ಟು ಹೆಚ್ಚಳ: ಜುಲೈನಿಂದ ಅನ್ವಯವಾಗುವಂತೆ ಜಾರಿ
ಹೊಸದಿಲ್ಲಿ: ರೈಲ್ವೆ ಮಂಡಳಿಯು ತನ್ನ ಉದ್ಯೋಗಿಗಳ ತುಟ್ಟಿ ಭತ್ತೆಯನ್ನು ಪರಿಷ್ಕರಿಸಿದ್ದು, ಶೇ.42ರಿಂದ ಶೇ.46ಕ್ಕೆ ಹೆಚ್ಚಿಸಿದೆ. 2023ರ ಜು.1 ರಿಂದ ಅನ್ವಯವಾಗುವಂತೆ ಪರಿಷ್ಕೃತ ತುಟ್ಟಿ ಭತ್ತೆಯನ್ನು ಪರಿಷ್ಕರಿಸಲಾಗಿದೆಯೆಂದು ರೈಲ್ವೆ ಮಂಡಳಿ ಮಂಗಳವಾರ ತಿಳಿಸಿದೆ.
ಈ ಬಗ್ಗೆ 2023ರ ಅ.23ರಂದು ಅಖಿಲ ಭಾರತ ರೈಲ್ವೇಯ ಮಹಾಪ್ರಬಂಧಕರು ಹಾಗೂ ಮುಖ್ಯ ಆಡಳಿತಾತ್ಮಕ ಅಧಿಕಾರಿಗಳಿಗೆ ಲಿಖಿತ ಸಂದೇಶವನ್ನು ನೀಡಲಾಗಿದೆ ಎಂದು ರೈಲ್ವೆ ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರೈಲ್ವೆ ಉದ್ಯೋಗಿಗಳು ತಮ್ಮ ಪರಿಷ್ಕೃತ ತುಟ್ಟಿಭತ್ತೆಯನ್ನು ಜು.1ರಿಂದ ಅನ್ವಯವಾಗುವಂತೆ ಬಾಕಿಮೊತ್ತ (ಅರಿಯರ್ಸ್) ದೊಂದಿಗೆ ಮುಂದಿನ ತಿಂಗಳಿನಿಂದ ಪಡೆಯಲಿದ್ದಾರೆ. ತುಟ್ಟಿಭತ್ತೆ ಏರಿಕೆಯನ್ನು ರೈಲ್ವೆ ನೌಕರರ ವಿವಿಧ ಒಕ್ಕೂಟಗಳು ಸ್ವಾಗತಿಸಿವೆ.
ಹಣದುಬ್ಬರದ ಪರಿಣಾಮವನ್ನು ನಿಯಂತ್ರಿಸಲು ಹಾಗೂ ಗ್ರಾಹಕ ದರ ಸೂಚ್ಯಂಕದ ಆಧಾರದಲ್ಲಿ ತುಟ್ಚಿಭತ್ತೆಯನ್ನು ಪಾವತಿಸುವುದಾಗಿ ರೈಲ್ವೆ ಮಂಡಳಿ ಪ್ರಕಟಿಸಿರುವುದನ್ನು ಭಾರತೀಯ ರೈಲ್ವೆ ಸಿಬ್ಬಂದಿಯ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಘವಯ್ಯ ಸ್ವಾಗತಿಸಿದ್ದಾರೆ. ಆದರೆ ಕೋವಿಡ್ ಹಾವಳಿಯ ಹಿನ್ನೆಲೆಯಲ್ಲಿ ಸ್ತಂಭನಗೊಳಿಸಲಾಗಿದ್ದ 2020ರ ಜನವರಿಯಿಂದ 2021ರ ಜೂನ್ ವರೆಗಿನ ತುಟ್ಟಿಭತ್ತೆಯನ್ನು ಕೂಡಾ ಪಾವತಿಸಬೇಕೆಂಬ ಬೇಡಿಕೆಯನ್ನು ಒಕ್ಕೂಟ ಮುದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.