ಯುವ ನಾಯಕರಿಗಾಗಿ ಕೇಂದ್ರದಿಂದ ‘ಮೇರಾ ಯುವ ಭಾರತ ’ವೇದಿಕೆ
ಹೊಸದಿಲ್ಲಿ:ಯುವಜನರ ಅಭಿವೃದ್ಧಿಗಾಗಿ ನೂತನ ಸರಕಾರಿ ವೇದಿಕೆಯೊಂದನ್ನು ಸ್ಥಾಪಿಸುವುದಾಗಿ ಕೇಂದ್ರವು ಬುಧವಾರ ಪ್ರಕಟಿಸಿದೆ.
‘ಮೇರಾ ಯುವ ಭಾರತ ’ಅಥವಾ ‘ಮೈ ಯುವ ಭಾರತ’ ಎಂದು ಹೆಸರಿಸಲಾಗಿರುವ ಈ ವೇದಿಕೆಯು ಅವರನ್ನು ಸಾಮಾಜಿಕ ಆವಿಷ್ಕಾರಿಗಳು ಮತ್ತು ಸಮುದಾಯಗಳಲ್ಲಿ ನಾಯಕರನ್ನಾಗಿ ರೂಪಿಸಲು ಅವರಲ್ಲಿ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿ ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 15ರಿಂದ 20 ವರ್ಷ ವಯೋಗುಂಪಿನ ಯುವಜನರು ವೇದಿಕೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ ಠಾಕೂರ್ ಅವರು, ಮೈ ಭಾರತ ಸ್ವಾಯತ್ತ ಸಂಸ್ಥೆಯಾಗಿರಲಿದ್ದು,ಯುವಜನರ ಅಭಿವೃದ್ಧಿ ಮತ್ತು ಯುವಜನರ ನೇತೃತ್ವದ ಅಭಿವೃದ್ಧಿಗಾಗಿ ತಂತ್ರಜ್ಞಾನದಿಂದ ಚಾಲಿತ ಯಾಂತ್ರಿಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಅದು ಯುವಜನತೆಗೆ ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಲು ಸಮಾನ ಅವಕಾಶವನ್ನೂ ಒದಗಿಸಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅ.31 ರಂದು ಈ ವೇದಿಕೆಯನ್ನು ರಾಷ್ಟ್ರಕ್ಕೆ ಅರ್ಪಿಸಲಾಗುವುದು ಎಂದು ತಿಳಿಸಿದರು.