ಕೇರಳದಲ್ಲಿನ ನಿಫಾ ವೈರಸ್ | ತನಿಖೆಯ ನೆರವಿಗೆ ಕೇಂದ್ರ ತಂಡ
ಹೊಸದಿಲ್ಲಿ: ಮಲ್ಲಪುರಂ ಜಿಲ್ಲೆಯಲ್ಲಿ ಪತ್ತೆಯಾಗಿರುವ ನಿಫಾ ವೈರಸ್ ಪ್ರಕರಣದ ಸಾಂಕ್ರಾಮಿಕ ಸಂಪರ್ಕವನ್ನು ಪತ್ತೆ ಹಚ್ಚಲು ಹಾಗೂ ತಾಂತ್ರಿಕ ನೆರವು ಒದಗಿಸಲು ಕೇಂದ್ರ ಸರಕಾರವು ಕೇರಳದ ನೆರವಿಗೆ ಹಲವು ಸದಸ್ಯರ ಜಂಟಿ ಸಾಂಕ್ರಾಮಿಕ ಸ್ಪಂದನಾ ತಂಡವನ್ನು ನಿಯೋಜಿಸಲಿದೆ ಎಂದು ವರದಿಯಾಗಿದೆ.
ರವಿವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಮಲ್ಲಪುರಂ ಜಿಲ್ಲೆಯ 14 ವರ್ಷದ ಬಾಲಕನಲ್ಲಿ ಗಂಭೀರ ಸ್ವರೂಪದ ಎನ್ಸೆಫಲೈಟಿಸ್ ಸಿಂಡ್ರೋಮ್ ಕಾಣಿಸಿಕೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೋಡ್‌ನ ಉನ್ನತ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸುವುದಕ್ಕೂ ಮುನ್ನ, ಪೆರಿಂತಲ್‌ಮನ್ನದ ಆರೋಗ್ಯ ಕೇಂದ್ರವೊಂದಕ್ಕೆ ದಾಖಲಿಸಲಾಗಿತ್ತು ಎಂದು ಹೇಳಿದೆ.
ಬಾಲಕನು ಆ ರೋಗಕ್ಕೆ ಬಲಿಯಾಗಿದ್ದು, ಆತನ ರಕ್ತದ ಮಾದರಿಗಳನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳಿಸಿಕೊಡಲಾಗಿತ್ತು. ರಕ್ತದ ಮಾದರಿಗಳನ್ನು ಪರೀಕ್ಷಿಸಿದ ಸಂಸ್ಥೆಯು, ಅದನ್ನು ನಿಫಾ ವೈರಸ್ ಸೋಂಕು ಎಂದು ದೃಢಪಡಿಸಿತ್ತು.
ಹಣ್ಣಿನ ಬಾವಲಿಗಳು ಸಾಮಾನ್ಯವಾಗಿ ನಿಫಾ ವೈರಸ್‌ನ ವಾಹಕಗಳಾಗಿದ್ದು, ಬಾವಲಿಗಳಿಂದ ಕಲುಷಿತಗೊಂಡಿರುವ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವ ಮನುಷ್ಯರು ನಿಫಾ ಸೋಂಕಿಗೆ ತುತ್ತಾಗುತ್ತಾರೆ.
ಈ ಹಿಂದೆಯೂ ಕೇರಳದಲ್ಲಿ ನಿಫಾ ವೈರಸ್ ಸೋಂಕು ಹರಡಿದ್ದು, ಕಡೆಯದಾಗಿ 2023ರಲ್ಲಿ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮೃತ ಬಾಲಕನ ಕುಟುಂಬ ಹಾಗೂ ನೆರೆಹೊರೆಯವರಲ್ಲಿ ಸಕ್ರಿಯ ಸೋಂಕು ಪ್ರಕರಣಗಳನ್ನು ಪತ್ತೆ ಹಚ್ಚುವುದೂ ಸೇರಿದಂತೆ ಕಟ್ಟುನಿಟ್ಟಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೊಳಿಸುವಂತೆ ಕೇರಳ ರಾಜ್ಯಕ್ಕೆ ಸಲಹೆ ನೀಡಿರುವ ಸಚಿವಾಲಯವು, ಪ್ರಕರಣ ಪತ್ತೆಯಾಗಿರುವ ಪ್ರದೇಶದ ಸಾಮ್ಯತೆ ಹೊಂದಿರುವ ಪ್ರದೇಶಗಳನ್ನೂ ಗುರುತಿಸುವಂತೆ ಸೂಚನೆ ನೀಡಿದೆ.
ಮೃತ ರೋಗಿಯ ಸಂಪರ್ಕದಲ್ಲಿ ಕಳೆದ 12 ದಿನಗಳಿಂದ ಇದ್ದ ವ್ಯಕ್ತಿಗಳನ್ನು ಗುರುತಿಸಿ, ಅಂಥವರನ್ನು ಜನರಿಂದ ಕಟ್ಟುನಿಟ್ಟಾಗಿ ಪ್ರತ್ಯೇಕವಾಗಿರಿಸುವ ಹಾಗೂ ಶಂಕಿತರನ್ನು ಬೇರ್ಪಡಿಸುವ ಕ್ರಮಗಳನ್ನು ಜಾರಿಗೊಳಿಸಬೇಕೆಂದೂ ಕೇರಳ ರಾಜ್ಯಕ್ಕೆ ಸಲಹೆ ನೀಡಲಾಗಿದೆ.
ಆರೋಗ್ಯ ಸಚಿವಾಲಯದ 'ಒನ್ ಹೆಲ್ತ್' ಮಿಷನ್‌ನ ಹಲವು ಸದಸ್ಯರ ಜಂಟಿ ಸಾಂಕ್ರಾಮಿಕ ಸ್ಪಂದನಾ ತಂಡವು ಪ್ರಕರಣವನ್ನು ತನಿಖೆ ಮಾಡಲು, ಪ್ರಕರಣಕ್ಕಿರುವ ಸಾಂಕ್ರಾಮಿಕ ಸಂರ್ಪಕವನ್ನು ಪತ್ತೆ ಹಚ್ಚಲು ಹಾಗೂ ತಾಂತ್ರಿಕ ನೆರವನ್ನು ಒದಗಿಸಲು ರಾಜ್ಯ ಸರಕಾರಕ್ಕೆ ನೆರವು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.