ದಿಲ್ಲಿ ಜಾಮಾ ಮಸ್ಜಿದ್ ಸೇರಿದಂತೆ 123 ವಕ್ಫ್ ಆಸ್ತಿಗಳನ್ನು ತನ್ನ ವಶಕ್ಕೆ ಪಡೆಯಲಿರುವ ಕೇಂದ್ರ
ಹೊಸದಿಲ್ಲಿ: ದಿಲ್ಲಿಯ ಜಾಮಾ ಮಸ್ಜಿದ್ ಸೇರಿದಂತೆ 123 ಆಸ್ತಿಗಳನ್ನು ವಕ್ಫ್ ಮಂಡಳಿಯಿಂದ ತನ್ನ ಸ್ವಾಧೀನಕ್ಕೆ ಪಡೆಯಲು ಕೇಂದ್ರ ಸರ್ಕಾರ ಆಗಸ್ಟ್ 22ರಂದು ನೋಟಿಸ್ ಹೊರಡಿಸಿದೆ ಎಂದು ವರದಿಯಾಗಿದೆ.
ಮಸೀದಿಗಳು, ದರ್ಗಾಗಳು ಸೇರಿದಂತೆ 123 ವಕ್ಫ್ ಆಸ್ತಿಗಳ ಮೇಲೆ ನಿಯಂತ್ರಣ ಪಡೆದುಕೊಳ್ಳಲು ಈ ವರ್ಷದ ಫೆಬ್ರವರಿಯಲ್ಲಿ ಸರ್ಕಾರ ನಿರ್ಧರಿಸಿತ್ತು. ನಿವೃತ್ತ ನ್ಯಾಯಮೂರ್ತಿ ಎಸ್‌ಪಿ ಗರ್ಗ್ ಅವರ ನೇತೃತ್ವದ ಸಮಿತಿಯೊಂದರ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ದ್ವಿಸದಸ್ಯ ಸಮಿತಿ ಮತ್ತು ಕೇಂದ್ರ ಸಚಿವಾಲಯದ ಜಮೀನು ಮತ್ತು ಅಭಿವೃದ್ಧಿ ಕಚೇರಿಯು ವಕ್ಫ್ ಆಸ್ತಿಗಳ ಡಿನೋಟಿಫಿಕೇಶನ್ ಕುರಿತ ತನ್ನ ವರದಿಯಲ್ಲಿ ದಿಲ್ಲಿ ವಕ್ಫ್ ಮಂಡಳಿಯಿಂದ ಯಾವುದೇ ಮನವಿ ಅಥವಾ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಹೇಳಿದೆ.
ಈ ಆಸ್ತಿಗಳ ಮೇಲೆ ದಿಲ್ಲಿ ವಕ್ಫ್ ಮಂಡಳಿ ಯಾವುದೇ ಹಕ್ಕು ಹೊಂದಿಲ್ಲ, ಅಥವಾ ಆಕ್ಷೇಪ ಸಲ್ಲಿಸಲೂ ಯಾವುದೇ ಆಸಕ್ತಿ ತೋರಿಲ್ಲ, ಈ ಹಿನ್ನೆಲೆಯಲ್ಲಿ 123 ವಕ್ಫ್ ಆಸ್ತಿಗಳ ಮೇಲಿನ ಹಕ್ಕುಗಳಿಂದ ದಿಲ್ಲಿ ವಕ್ಫ್ ಮಂಡಳಿಯಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಜಮೀನು ಮತ್ತು ಅಭಿವೃದ್ಧಿ ಕಚೇರಿಯ ಪತ್ರ ಹೇಳಿದೆ.
ಈ ವರ್ಷದ ಮೇ ತಿಂಗಳಿನಲ್ಲಿ 123 ಆಸ್ತಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ ದಿಲ್ಲಿ ವಕ್ಫ್ ಮಂಡಳಿ ಮತ್ತು ಕೇಂದ್ರ ಸರ್ಕಾರಗಳೆರಡೂ ಈ ಆಸ್ತಿ ತಮ್ಮದು ಎನ್ನುತ್ತಿರುವುದು ಇದನ್ನು ವಿವಾದಕ್ಕೀಡಾಗಿಸಿದೆ.
ಆಪ್ ಶಾಸಕ ಹಾಗೂ ದಿಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರು ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದಾರೆ ಹಾಗೂ ಈ ನಿರ್ಧಾರವು ಮುಸ್ಲಿಂ ಸಮುದಾಯದಲ್ಲಿ ಭಯ ಮತ್ತು ಅಸುರಕ್ಷತೆಯ ಭಾವನೆ ಸೃಷ್ಟಿಸಿದೆ ಎಂದು ಹೇಳಿದ್ದಾರೆ.