ಆಂಧ್ರಪ್ರದೇಶದಲ್ಲಿ ಚಂದ್ರಬಾಬು ‘ಮ್ಯಾಜಿಕ್’

Update: 2024-06-04 16:06 GMT

ಚಂದ್ರಬಾಬು ನಾಯ್ಡು | PTI

ಹೊಸದಿಲ್ಲಿ: 2024ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಮ್ ಪಾರ್ಟಿ (ಟಿಡಿಪಿ) ಅತ್ಯುತ್ತಮ ನಿರ್ವಹಣೆಯನ್ನು ನೀಡಿದೆ. ಅದು 16 ಲೋಕಸಭಾ ಕ್ಷೇತ್ರಗಳು ಮತ್ತು 136 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ.

ಲೋಕಸಭಾ ಚುನಾವಣೆಯಲ್ಲಿ, ರಾಜ್ಯದ ಒಟ್ಟು 25 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಟಿಡಿಪಿ ಗೆದ್ದಿದೆ. ಅದರ ಮಿತ್ರಪಕ್ಷ ಬಿಜೆಪಿ 3 ಸ್ಥಾನಗಳನ್ನು ಗಳಿಸಿದೆ. ವೈಎಸ್ಆರ್ಸಿಪಿ 4 ಸ್ಥಾನಗಳನ್ನು ಗೆದ್ದರೆ, ಜೆಎನ್ಪಿ 2 ಸ್ಥಾನಗಳಲ್ಲಿ ವಿಜಯಿಯಾಗಿದೆ.

ಅದೇ ವೇಳೆ, 175 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎನ್ಪಿ 21 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಆಡಳಿತಾರೂಢ ವೈಎಸ್ಆರ್ಸಿಪಿ ಕೇವಲ 10 ಸ್ಥಾನಗಳನ್ನು ಗೆದ್ದಿದೆ.

ಒಟ್ಟು 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ, ಟಿಡಿಪಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಎರಡು ಬಹುಮತವನ್ನು ಪಡೆದಿದೆ. ಇದರೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸಲು ಟಿಡಿಪಿ ಸಿದ್ಧವಾಗಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ, ವೈ.ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದ ಯುವಜನ ರೈತು ಕಾಂಗ್ರೆಸ್ ಪಾರ್ಟಿ (ವೈಎಸ್ಆರ್ಸಿಪಿ)ಯು 175 ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಅಮೋಘ ವಿಜಯವನ್ನು ದಾಖಲಿಸಿತ್ತು. ಆ ಚುನಾವಣೆಯಲ್ಲಿ ಟಿಡಿಪಿಗೆ ಕೇವಲ 23 ಸ್ಥಾನಗಳು ಲಭಿಸಿದ್ದವು.

2019ರ ಲೋಕಸಭಾ ಚುನಾವಣೆಗೆ ಮುನ್ನ, ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ)ನಿಂದ ಹೊರಬಂದು ಕಾಂಗ್ರೆಸ್ ನೇತೃತ್ವದ ಯನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ)ಗೆ ಸೇರ್ಪಡೆಯಾಗುವ ನಾಯ್ಡುರ ನಿರ್ಧಾರವು ಅವರಿಗೆ ದುಬಾರಿಯಾಗಿ ಪರಿಣಮಿಸಿತ್ತು. ಅಂದು ಟಿಡಿಪಿ ಲೋಕಸಭಾ ಮತ್ತು ವಿಧಾನಸಭಾ ಎರಡೂ ಚುನಾವಣೆಗಳಲ್ಲಿ ಸೋಲನುಭವಿಸಿತು ಹಾಗೂ ನಾಯ್ಡು ರಾಜಕೀಯವಾಗಿ ಮೂಲೆಗುಂಪಾದರು.

ಈಗ 2024ರಲ್ಲಿ, ನಾಯ್ಡು ಪುಟಿದೆದ್ದಿದ್ದಾರೆ. 2023 ನವೆಂಬರ್ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಅದು ಈಗ ಅವರಿಗೆ ಪೂರಕವಾದಂತೆ ಕಾಣುತ್ತದೆ. ಜನರು ವೈಎಸ್ಆರ್ಸಿಪಿ ಸರಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು ಮತ್ತು ನಾಯ್ಡುಗೆ ಸಹಾನುಭೂತಿ ತೋರಿಸಿದರು.

2024ರ ಮಾರ್ಚ್ನಲ್ಲಿ, ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ಲೋಕಸಭಾ ಚುನಾವಣೆಯ ಘೋಷಣೆಗೆ ಕೆಲವೇ ದಿನಗಳಿರುವಾಗ ನಾಯ್ಡು ಕಾಂಗ್ರೆಸ್ನಿಂದ ದೂರವಾಗಿ ಎನ್ಡಿಎಗೆ ಮರುಸೇರ್ಪಡೆಗೊಂಡರು. ಇದು ಪರಿಣಾಮಕಾರಿ ನಡೆಯಾಯಿತು ಮತ್ತು ಅವರು ಚುನಾವಣೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ನಾಯ್ಡುರ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಸ್ಥಿರತೆಯ ಭರವಸೆಗಳು ಮತದಾರರ ಮೇಲೆ ಪರಿಣಾಮ ಬೀರಿದವು. ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಮತ್ತು ಬಿಜೆಪಿ ಜೊತೆಗಿನ ಮೈತ್ರಿಯು ನಾಯ್ಡುರ ಸ್ಥಿತಿಯನ್ನು ಮತ್ತಷ್ಟು ಬಲಗೊಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News