ಮಿಚಾಂಗ್ ಚಂಡಮಾರುತ : ಪ್ರತಿಯೊಬ್ಬ ಸಂತ್ರಸ್ತರಿಗೂ 6 ಸಾವಿರ ರೂ. ಪರಿಹಾರ ಪ್ರಕಟಿಸಿದ ಸಿಎಂ ಎಂ.ಕೆ.ಸ್ಟಾಲಿನ್

Update: 2023-12-09 14:16 GMT

Photo: PTI

ಚೆನ್ನೈ: ಇತ್ತೀಚೆಗೆ ಮಿಚಾಂಗ್ ಚಂಡಮಾರುತದ ಕಾರಣಕ್ಕೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಲಾ ರೂ. 5 ಲಕ್ಷ ಪರಿಹಾರ ಧನವನ್ನು ಘೋಷಿಸಿದ್ದಾರೆ. ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವ ತಮಿಳುನಾಡು ಮುಖ್ಯಮಂತ್ರಿ, ಚಂಡಮಾರುತದ ಕಾರಣಕ್ಕೆ ಸಂತ್ರಸ್ತರಾಗಿರುವ ಪ್ರತಿಯೊಬ್ಬರಿಗೂ ತಲಾ ರೂ. 6,000 ಮೊತ್ತವನ್ನು ವಿತರಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ಈ ಪರಿಹಾರ ಮೊತ್ತವನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಪ್ರವಾಹದ ಕಾರಣಕ್ಕೆ ತಮ್ಮ ಗುಡಿಸಲುಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಈ ಮುನ್ನ ಘೋಷಿಸಲಾಗಿದ್ದ ಪರಿಹಾರ ಧನವನ್ನು ರೂ. 4,000ಕ್ಕೆ ಪ್ರತಿಯಾಗಿ ರೂ. 8,000ಕ್ಕೆ ಏರಿಕೆ ಮಾಡಲೂ ನಿರ್ಧರಿಸಲಾಗಿದೆ. ಏತ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭತ್ತದ ಬೆಳೆಗಾರರಿಗೆ ಹಾಗೂ ಶೇ. 33ಕ್ಕೂ ಹೆಚ್ಚು ಬೆಳೆ ಹಾನಿ ಅನುಭವಿಸಿರುವವರಿಗೆ ಪ್ರತಿ ಹೆಕ್ಟೇರ್ ಗೆ ರೂ. 17,000 ಪರಿಹಾರ ಮೊತ್ತವನ್ನೂ ಘೋಷಿಸಲಾಗಿದೆ. ಇದರೊಂದಿಗೆ, ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ತಮ್ಮ ದನ ಹಾಗೂ ಎಮ್ಮೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಈ ಮುನ್ನ ಘೋಷಿಸಿದ್ದ ತಲಾ ರೂ. 30,000ಕ್ಕೆ ಪ್ರತಿಯಾಗಿ ರೂ. 37,500 ಪರಿಹಾರ ಧನವನ್ನು ವಿತರಿಸಲೂ ನಿರ್ಧರಿಸಲಾಗಿದೆ.

ಒಂದು ವೇಳೆ ಮೇಕೆಗಳು ಮೃತಪಟ್ಟಿದ್ದರೆ, ತಲಾ ಮೇಕೆಗೆ ವಿತರಿಸಲಾಗುವ ಪರಿಹಾರ ಧನವನ್ನು ರೂ. 3,000ದಿಂದ ರೂ. 4,000ಕ್ಕೆ ಏರಿಕೆ ಮಾಡಲಾಗಿದೆ. ಪ್ರವಾಹದ ಕಾರಣಕ್ಕೆ ತಮ್ಮ ದೋಣಿಗಳು ಹಾಗೂ ಮೀನುಗಾರಿಕೆ ಬಲೆಗಳಿಗೆ ಪೂರ್ಣ ಪ್ರಮಾಣದ ಹಾನಿ ಅನುಭವಿಸಿರುವ ಮೀನುಗಾರರಿಗೆ ಈ ಮುನ್ನ ಘೋಷಿಸಿದ್ದ ರೂ. 32,000ಕ್ಕೆ ಬದಲಿಯಾಗಿ ರೂ. 50,000 ಪರಿಹಾರ ಧನವನ್ನು ಪ್ರಕಟಿಸಲಾಗಿದೆ. ಇದೇ ವೇಳೆ ಭಾಗಶಃ ಹಾನಿ ಅನುಭವಿಸಿರುವ ಮೀನುಗಾರರಿಗೆ ರೂ. 15,000 ಪರಿಹಾರವನ್ನು ಘೋಷಿಸಲಾಗಿದೆ.

ಇದಕ್ಕೂ ಮುನ್ನ ಡಿಸೆಂಬರ್ 8ರಂದು, ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಗೆ ನನ್ನ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಟಿಸಿದ್ದರು. ಅಲ್ಲದೆ, ಇತರರೂ ಉದಾರವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯ ಬೆನ್ನಿಗೇ ಡಿಎಂಕೆಯ ಎಲ್ಲ ಶಾಸಕರು ಹಾಗೂ ಸಂಸದರು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಇದಲ್ಲದೆ ತಮಿಳುನಾಡು ಐಎಎಸ್ ಅಧಿಕಾರಿಗಳ ಒಕ್ಕೂಟ ಕೂಡಾ ತನ್ನ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ದೇಣಿಗೆ ನೀಡಲಿದೆ. ಇದರೊಂದಿಗೆ ಐಪಿಎಸ್ ಅಧಿಕಾರಿಗಳ ಒಕ್ಕೂಟವೂ ತಮ್ಮ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News