ಛತ್ತೀಸ್‌ಗಡದಲ್ಲಿ ಆದಿವಾಸಿ ಸಂಘಟನೆ ಮೂಲವಾಸಿ ಬಚಾವೊ ಮಂಚ್‌ಗೆ ನಿಷೇಧ

Update: 2024-11-19 15:00 GMT

PC : themooknayak

ರಾಯಪುರ: ಛತ್ತೀಸ್‌ಗಡ ಸರಕಾರವು ಆದಿವಾಸಿ ಸಂಘಟನೆ ಮೂಲವಾಸಿ ಬಚಾವೊ ಮಂಚ್ ಅನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ. ಸರಕಾರದ ಈ ಕ್ರಮವು ಮಂಚ್ ಅನ್ನು ಬೆಂಬಲಿಸಿರುವ ಸಾಮಾಜಿಕ ಕಾರ್ಯಕರ್ತರು ಮತ್ತು ಗುಂಪುಗಳಿಂದ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಛತ್ತೀಸ್‌ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ,2005ರಡಿ ಅ.30ರಂದು ಈ ನಿಷೇಧವನ್ನು ಹೇರಲಾಗಿದೆ. ಸಂಘಟನೆಯು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ವಿರೋಧಿಸುತ್ತಿದೆ ಮತ್ತು ಸಾರ್ವಜನಿಕರನ್ನು ಪ್ರಚೋದಿಸುತ್ತಿದೆ ಎಂದು ಸರಕಾರವು ಆರೋಪಿಸಿದೆ.

ಸಂಘಟನೆಯು ಅಭಿವೃದ್ಧಿ ಯೋಜನೆಗಳಿಗಾಗಿ ಸ್ಥಾಪಿಸಲಾಗಿರುವ ಭದ್ರತಾ ಶಿಬಿರಗಳ ವಿರುದ್ಧ ಜನರನ್ನು ಪ್ರಚೋದಿಸುತ್ತಿದೆ. ಅದು ಕಾನೂನಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಕಾನೂನಿನಿಂದ ಸ್ಥಾಪಿತ ಸಂಸ್ಥೆಗಳಿಗೆ ಅಸಹಕಾರವನ್ನು ಉತ್ತೇಜಿಸುತ್ತಿದೆ,ತನ್ಮೂಲಕ ಸಾರ್ವಜನಿಕ ಸುವ್ಯವಸ್ಥೆ,ಶಾಂತಿಗೆ ವ್ಯತ್ಯಯವನ್ನುಂಟು ಮಾಡುತ್ತಿದೆ ಮತ್ತು ನಾಗರಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದೆ. ಇದು ರಾಜ್ಯದ ಭದ್ರತೆಗೆ ಹಾನಿಕರವಾಗಿದೆ ಎಂದೂ ಸರಕಾರವು ಆರೋಪಿಸಿದೆ.

ಸರಕಾರದ ಈ ಕ್ರಮವನ್ನು ನಿರಂಕುಶ ಎಂದು ಬಣ್ಣಿಸಿರುವ ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕ ಸಮಾಜ ಸಂಘಟನೆಗಳು,ಆಡಳಿತವು ಟೀಕಿಸುವ ಧ್ವನಿಗಳ ಸದ್ದಡಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಾನವ ಹಕ್ಕುಗಳ ಕುರಿತು ಕೆಲಸ ಮಾಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವೇದಿಕೆ ‘ಫೋರಮ್ ಅಗೇಯ್ನಸ್ಟ್ ಕಾರ್ಪೊರೇಟೈಜೇಷನ್ ಆ್ಯಂಡ್ ಮಿಲಿಟರೈಜೇಷನ್’,‘ನಿಶಸ್ತ್ರ ಪ್ರಜಾಸತ್ತಾತ್ಮಕ ಸಾಮೂಹಿಕ ಚಳವಳಿ’ಯೊಂದಿಗೆ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಸರಕಾರವು ಸಶಸ್ತ್ರ ಮಾವೋವಾದಿಗಳೊಂದಿಗೆ ಶಾಂತಿ ಮಾತುಕತೆಗಳ ಸೋಗನ್ನು ಹಾಕುತ್ತಿದೆ ಎಂದು ಹೇಳಿದೆ.

ಮೂಲವಾಸಿ ಬಚಾವೊ ಮಂಚ್‌ನ ನಿಷೇಧಕ್ಕೆ ಆಧಾರವೇನು? ಅದನ್ನು ರೂಪಿಸುವುದನ್ನು ಬಸ್ತರ್‌ನ ಆದಿವಾಸಿಗಳಿಗೆ ಅನಿವಾರ್ಯವಾಗಿಸಿದ್ದು ಯಾರು? ಸರಕಾರವು ಸಿಲ್ಗೆರ್‌ನಲ್ಲಿ ನಾಲ್ವರನ್ನು ಕೊಲ್ಲುವ ಬದಲು ಆದಿವಾಸಿಗಳ ಬೇಡಿಕೆಗಳಿಗೆ ಕಿವಿಗೊಟ್ಟಿದ್ದರೆ, ಗಣಿಗಾರಿಕೆಯನ್ನು ಮತ್ತು ಶಿಬಿರಗಳ ನಿರ್ಮಾಣ ನಿಲ್ಲಿಸಿದ್ದರೆ ಮಂಚ್‌ನ ಅಗತ್ಯವೇ ಇರುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸೋನಿ ಸೋರಿಯವರನ್ನು ಉಲ್ಲೇಖಿಸಿ ವೇದಿಕೆಯು ಹೇಳಿದೆ.

ಮೇ 2021ರಲ್ಲಿ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯ ಸಿಲ್ಗೆರ್ ಗ್ರಾಮದಲ್ಲಿ ಆದಿವಾಸಿಗಳ ಗುಂಪೊಂದು ತಮ್ಮ ಪ್ರದೇಶದಲ್ಲಿ ಭದ್ರತಾ ಶಿಬಿರದ ಸ್ಥಾಪನೆಯ ವಿರುದ್ಧ ಪ್ರತಿಭಟಿಸಿದಾಗ ಪೋಲಿಸರು ನಡೆಸಿದ್ದ ಗೋಲಿಬಾರ್‌ನಲ್ಲಿ ನಾಲ್ವರು ಕೊಲ್ಲಲ್ಲಟ್ಟಿದ್ದರು.

ಮೂಲವಾಸಿ ಬಚಾವೊ ಮಂಚ್‌ನ ಹಲವಾರು ಸದಸ್ಯರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದೂ ವೇದಿಕೆಯು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News