ಕ್ವೀರ್ ಸಮುದಾಯಕ್ಕೆ ಯಾವುದೇ ಸೇವೆ, ಸವಲತ್ತು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ: ಸುಪ್ರೀಂ ಕೋರ್ಟ್‌

Update: 2023-10-17 06:24 GMT

ಹೊಸದಿಲ್ಲಿ: “ಕ್ವೀರ್ ಸಮುದಾಯಕ್ಕೆ (ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್ ಸೇರಿದಂತೆ ಒಟ್ಟಾರೆ ಭಿನ್ನ ಸಾಮಾನ್ಯರನ್ನು ಸಂಬೋಧಿಸಲು ಕ್ವೀರ್ ಪದವನ್ನು ಬಳಸಲಾಗುತ್ತದೆ) ಯಾವುದೇ ಸೇವೆಯನ್ನು ಅಥವಾ ಸವಲತ್ತನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ,” ಎಂದು ಸಲಿಂಗ ವಿವಾಹದ ಕಾನೂನು ಮಾನ್ಯತೆಯ ಕುರಿತಾದ ಪ್ರಕರಣದ ಕುರಿತಂತೆ ಇಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ವೀರ್ ಸಮುದಾಯದ ಕುರಿತಂತೆ ತಾರತಮ್ಯ ಮಾಡಬಾರದು,” ಎಂದು ಸಲಿಂಗ ವಿವಾಹದ ಕಾನೂನು ಮಾನ್ಯತೆ ಕುರಿತಂತೆ ಇಂದು ನೀಡುವ ತೀರ್ಪಿನ ಭಾಗವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಮನವಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಮೇ ತಿಂಗಳಿನಲ್ಲಿ ಕಾಯ್ದಿರಿಸಿತ್ತು.

“ಲಿಂಗದ ಗುರುತಿನ ಬಗ್ಗೆ ವಿಚಾರಿಸಲೆಂದೇ ಠಾಣೆಗೆ ಬರ ಹೇಳಿ ಕ್ವೀರ್ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು, ತಮ್ಮ ಹೆತ್ತವರ ಕುಟುಂಬಕ್ಕೆ ಮರಳುವಂತೆ ಕ್ವೀರ್ ಸಮುದಾಯದವರಿಗೆ ಪೊಲೀಸರು ಬಲವಂತಪಡಿಸುವಂತಿಲ್ಲ ಅವರಿಗೆ ಹಾರ್ಮೋನಲ್‌ ಥೆರಪಿಗೆ ಒಳಗಾಗುವಂತೆಯೂ ಬಲವಂತಪಡಿಸುವ ಹಾಗಿಲ್ಲ ಸಾರ್ವಜನಿಕರಿಗೆ ಕ್ವೀರ್ ಸಮುದಾಯದವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಈ ಸಮುದಾಯಕ್ಕಾಗಿ ಹಾಟ್‌ಲೈನ್‌ ರಚಿಸಬೇಕು, ಅವರಿಗಾಗಿ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು, ತೃತೀಯ ಲಿಂಗಿ ಮಕ್ಕಳಿಗೆ ಶಸ್ತ್ರಕ್ರಿಯೆಗೆ ಬಲವಂತಪಡಿಸಬಾರದು” ಎಂದು ಸಿಜೆಐ ಹೇಳಿದ್ದಾರೆ.

ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಎಸ್.ಕೆ.ಕೌಲ್, ನ್ಯಾ. ಎಸ್.ಆರ್.ಭಟ್, ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ನಡೆಸುತ್ತಿದೆ. ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಹಾಗೂ ಆ ಅರ್ಜಿಗಳಿಂದ ಎದುರಾಗಲಿರುವ ಕಾನೂನು ಮತ್ತು ಸಾಮಾಜಿಕ ಪ್ರಶ್ನೆಗಳ ಕುರಿತು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಲ್ಲಿ ಸುಪ್ರೀಂ ಕೋರ್ಟ್ ನಿರಂತರವಾಗಿ ವಿಚಾರಣೆ ನಡೆಸಿತ್ತು.

ತಮ್ಮ ಸಂಬಂಧಕ್ಕೆ ‘ವಿವಾಹ’ ಎಂಬ ಕಾನೂನಾತ್ಮಕ ಹಾಗೂ ಸಾಮಾಜಿಕ ಸ್ಥಾನವನ್ನು ನೀಡಬೇಕು ಎಂದು ಕೋರಿ 18 ದಂಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಇದರೊಂದಿಗೆ, ಇಂತಹ ಸಂಬಂಧಗಳನ್ನು ವಿಶೇಷ ವಿವಾಹ ಕಾಯ್ದೆ ಅಡಿ ‘ವಿವಾಹ’ ಎಂದು ಘೋಷಿಸಬೇಕು ಎಂದೂ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ.

ಆದರೆ, ಸಲಿಂಗ ವಿವಾಹಕ್ಕೆ ವೈವಾಹಿಕ ಸ್ಥಾನಮಾನ ನೀಡುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ರೂಢಿಗಳೊಂದಿಗೆ ಸಂಬಂಧ ಹೊಂದಿರುವ ಕಾನೂನಾತ್ಮಕ ತೊಡಕು ಎದುರಾಗಲಿದೆ. ಹೀಗಾಗಿ ಈ ವಿಷಯವು ವೈಯಕ್ತಿಕ ಕಾನೂನಿನಡಿ ರಾಷ್ಟ್ರ ಹಾಗೂ ಸಾಮಾಜಿಕ ಮಟ್ಟದಲ್ಲಿ ವಿಸ್ತಾರ ಚರ್ಚೆಗೊಳಗಾಗಬೇಕಿದೆ ಎಂದು ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಎದುರು ಪ್ರತಿವಾದ ಮಂಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News