ತ್ರಿಪುರಾ: ಶಾಲೆಯಿಂದ ಮರಳುತ್ತಿದ್ದ ಬಾಲಕಿಯ ಸಾಮೂಹಿಕ ಅತ್ಯಾಚಾರ

Update: 2024-09-16 02:36 GMT

ಸಾಂದರ್ಭಿಕ ಚಿತ್ರ (PTI)

ಗುವಾಹಟಿ: ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಮರುದಿನವೇ ಶಾಲೆಯಿಂದ ವಾಪಸ್ಸಾಗುತ್ತಿದ್ದ ಐದನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ತ್ರಿಪುರಾ ಜಿಲ್ಲೆಯಿಂದ ವರದಿಯಾಗಿದೆ.

ವಿದ್ಯಾರ್ಥಿನಿ ಶಾಲೆಯಿಂದ ವಾಪಸ್ಸಾಗದೇ ಇದ್ದಾಗ ಬೆಲೋನಿಯಾ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಮೂಲಗಳು ಹೇಳಿವೆ. ಪುತ್ರಿಯನ್ನು ಅಪಹರಿಸಲಾಗಿದ್ದು, ಶಾಲೆಯಲ್ಲಿ ಇತರರ ಬಳಿ ಮಾಹಿತಿ ಪಡೆಯಲಾಗುತ್ತಿದೆ ಎಂದು ತಂದೆ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಕಿಯ ಪತ್ತೆಯಾಗದೇ ಇದ್ದಾಗ ಪೊಲೀಸರ ನೆರವು ಪಡೆಯಲು ದೂರು ದಾಖಲಿಸಿದ್ದೇವೆ. ಶನಿವಾರ ರಾತ್ರಿ ಬಾಲಕಿ ಪಕ್ಕದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.

"ಐದನೇ ತರಗತಿ ಬಾಲಕಿ ಮನೆಗೆ ಮರಳಿಲ್ಲ ಎಂಬ ಮಾಹಿತಿ ನಮಗೆ ಬಂದಿತ್ತು. ನಾವು ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬ ಮನೆಯ ಬಳಿ ಆಕೆಯನ್ನು ಬಿಟ್ಟುಹೋಗಿರುವುದು ತಿಳಿಯಿತು. ಆತ ಅದೇ ಪ್ರದೇಶದ 22 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದೆ. ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ನ್ಯಾಯಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಬಾಲಕಿಯನ್ನು ವಿವಿಧ ಕಡೆಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ.

ಶುಕ್ರವಾರವಷ್ಟೇ ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಇಬ್ಬರೂ ಆರೋಪಿಗಳು ಅದೇ ಜಿಲ್ಲೆಯವರು. ಗುರುವಾರ ಸಂಜೆ ಅಂಗಡಿಗೆ ತೆರಳಿದ್ದ ಆಕೆಯನ್ನು ಅಪಹರಿಸಿ, ಪಕ್ಕದ ಕಾಡಿಗೆ ಒಯ್ದು ಅತ್ಯಾಚಾರ ಎಸಗಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News