ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಿ.ಟಿ.ಉಷಾರಿಂದ ರಾಜಕೀಯ: ವಿನೇಶ್ ಫೋಗಟ್ ಗಂಭೀರ ಆರೋಪ

Update: 2024-09-11 06:10 GMT

Photo: PTI

ಹೊಸದಿಲ್ಲಿ: “ನಾನು ಏನಕ್ಕಾಗಿ ಕುಸ್ತಿಯನ್ನು ಮುಂದುವರಿಸಬೇಕು?” ಎಂದು ಭಾರತೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾ ವಿರುದ್ಧ ವಾಗ್ದಾಳಿ ನಡೆಸಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಿ.ಟಿ.ಉಷಾ ರಾಜಕೀಯ ಮಾಡಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ನಿಂದ ಅನರ್ಹಗೊಂಡು, ತೀವ್ರ ಆಘಾತಕ್ಕೀಡಾಗಿದ್ದ ವಿನೇಶ್ ಫೋಗಟ್, ಭಾರತಕ್ಕೆ ಮರಳಿದ ನಂತರ ಕುಸ್ತಿಗೆ ವಿದಾಯ ಘೋಷಿಸಿ, ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್, “ಪಿ.ಟಿ.ಉಷಾ ಅವರು ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಿದ್ದರು. ಅಲ್ಲಿ ಒಂದು ಚಿತ್ರವನ್ನು ಸೆರೆ ಹಿಡಿಯಲಾಯಿತು. ನೀವು ಹೇಳಿದಂತೆ ಮುಚ್ಚಿದ ಬಾಗಿಲಿನ ಹಿಂದೆ ಸಾಕಷ್ಟು ರಾಜಕೀಯ ನಡೆಯುತ್ತದೆ. ಅದೇ ರೀತಿ ಪ್ಯಾರಿಸ್ ನಲ್ಲೂ ರಾಜಕೀಯ ನಡೆಯಿತು. ಅದರಿಂದಾಗಿಯೇ ನನ್ನ ಹೃದಯ ಒಡೆದು ಹೋಯಿತು. ಸಾಕಷ್ಟು ಮಂದಿ ನನಗೆ ಕುಸ್ತಿಯನ್ನು ಮುಂದುವರಿಸುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ, ಏನಕ್ಕಾಗಿ ನಾನು ಕುಸ್ತಿ ಮುಂದುವರಿಸಲಿ? ಎಲ್ಲ ಕಡೆಯೂ ರಾಜಕೀಯವಿದೆ” ಎಂದು ಕಿಡಿ ಕಾರಿದ್ದಾರೆ.

ತಮ್ಮೊಂದಿಗೆ ಪಿ.ಟಿ.ಉಷಾ ತೆಗೆಸಿಕೊಂಡ ಫೋಟೊ ಕುರಿತೂ ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್, ಆ ಫೋಟೊವನ್ನು ನನ್ನ ಗಮನಕ್ಕೆ ತಾರದೆ ತೆಗೆಸಿಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ. ಅದೊಂದು ಸೋಗು ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ಸದ್ಯ, ಕುಸ್ತಿಗೆ ವಿದಾಯ ಘೋಷಿಸಿ, ರೈಲ್ವೆ ಇಲಾಖೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ವಿನೇಶ್ ಫೋಗಟ್, ಸದ್ಯದಲ್ಲೇ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News