ಆತ್ಮಹತ್ಯೆಗೆ ಶರಣಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು; ಮುಂದಿನ 2 ತಿಂಗಳು ಪರೀಕ್ಷೆ ನಡೆಸದಂತೆ ತರಬೇತು ಕೇಂದ್ರಗಳಿಗೆ ಸೂಚನೆ

Update: 2023-08-28 14:06 GMT

ಸಾಂದರ್ಭಿಕ ಚಿತ್ರ. | Photo : PTI 

ಕೋಟಾ: ಹಲವು ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನೆಲೆಯಲ್ಲಿ ನೀಟ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ಎರಡು ತಿಂಗಳು ವಾಡಿಕೆಯಂತೆ ನಡೆಸುವ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ರಾಜಸ್ಥಾನದ ಕೋಟಾ ಜಿಲ್ಲಾಡಳಿತ ತರಬೇತು ಸಂಸ್ಥೆಗಳಿಗೆ ಸೋಮವಾರ ಸೂಚಿಸಿದೆ.

ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಜೆಇಇ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರತಿ ವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕೋಟಾಕ್ಕೆ ಆಗಮಿಸುತ್ತಾರೆ.

ಜಿಲ್ಲೆಯಲ್ಲಿ 2023ರಲ್ಲಿ ಇದುವರೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅತ್ಯಧಿಕ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆಗೈದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆವಿಷ್ಕಾರ್ ಶಂಬಾಜಿ ಕಾಸ್ಲೆ (17) ಜವಾಹರ್ ನಗರದ ತರಬೇತು ಸಂಸ್ಥೆಯೊಂದರಲ್ಲಿ ನೀಟ್‌ಗೆ ತರಬೇತು ಪಡೆಯುತ್ತಿದ್ದರು. ಅವರು ರವಿವಾರ ಅಣಕು ನೀಟ್ ಪರೀಕ್ಷೆ ಬರೆದು ಹೊರಬಂದ ನಿಮಿಷಗಳ ಬಳಿಕ ಅಪರಾಹ್ನ ಸುಮಾರು 3.15ಕ್ಕೆ ಸಂಸ್ಥೆಯ ಕಟ್ಟಡದ 6ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಆದರ್ಶ ರಾಜ್ (18) ಕುನ್ಹಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಬಾಡಿಗೆ ಫ್ಲ್ಯಾಟ್‌ನಲ್ಲಿ ಸಂಜೆ ಸುಮಾರು 7 ಗಂಟೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ತರಬೇತು ಕೇಂದ್ರಗಳು ವಾಡಿಕೆಯಂತೆ ನಡೆಸುವ ಪರೀಕ್ಷೆಯಲ್ಲಿ ಕಡಿಮೆ ಅಂಕ ಸಿಗುವ ಭೀತಿ ಇವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಳು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ರಾತ್ರಿ ನೀಡಿದ ಆದೇಶದಲ್ಲಿ ಕೋಟಾ ಜಿಲ್ಲಾಧಿಕಾರಿ ಒ.ಪಿ. ಬುಂಕರ್, ಮುಂದಿನ ಎರಡು ತಿಂಗಳು ವಾಡಿಕೆಯಂತೆ ನಡೆಸುವ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ತರಬೇತು ಕೇಂದ್ರಗಳಿಗೆ ಸೂಚಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ನೀಡಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News