ರಾಹುಲ್ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡುವವರು ಜೈಲಿನಲ್ಲಿರಬೇಕಾದ ನಿಜವಾದ ಭಯೋತ್ಪಾದಕರು : ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ : ಆಡಳಿತಾರೂಢ ಮೈತ್ರಿಕೂಟದ ನಾಯಕರು ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಇಂತಹ ಹೇಳಿಕೆಗಳನ್ನು ನೀಡುತ್ತಿರುವ ‘ದ್ವೇಷದಿಂದ ತುಂಬಿರುವ ಗುಲಾಮರು’ ಜೈಲಿನಲ್ಲಿರಬೇಕಾದ ನಿಜವಾದ ಭಯೋತ್ಪಾದಕರಾಗಿದ್ದಾರೆ ಎಂದು ಕಿಡಿಕಾರಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ‘ಸಂಪೂರ್ಣ ರಾಜಕೀಯ ಕೃಪಾಕಟಾಕ್ಷ’ದೊಂದಿಗೆ ಮತ್ತು ಅವರ ಸೂಚನೆಯ ಮೇರೆಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕರ ವಿರುದ್ಧ ಹಿಂಸಾತ್ಮಕ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಕುರಿತು ಹೇಳಿಕೆಗಾಗಿ ರಾಹುಲ್ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂ.ಗಳನ್ನು ನೀಡುವುದಾಗಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಘೋಷಿಸಿದ ಬಳಿಕ ಕಾಂಗ್ರೆಸ್‌ನ ಈ ಆರೋಪ ಹೊರಬಿದ್ದಿದೆ. ರವಿವಾರ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರು, ‘ಬಾಂಬ್‌ಗಳನ್ನು ತಯಾರಿಸುವವರು’ ರಾಹುಲ್ ಗಾಂಧಿಯವರನ್ನು ಬೆಂಬಲಿಸುತ್ತಿದ್ದಾರೆ. ಅವರು ‘ನಂ.1 ಭಯೋತ್ಪಾದಕ’ರಾಗಿದ್ದಾರೆ ಎಂದು ಹೇಳಿದ್ದರು. ಈ ಮೊದಲು ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮಾರ್ವಾ ಅವರು ರಾಹುಲ್ ವಿರುದ್ಧ ‘ಬೆದರಿಕೆ’ ಹೇಳಿಕೆಗಳನ್ನು ನೀಡಿದ್ದರು.
ಇಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಡಳಿತ ಮೈತ್ರಿಕೂಟದ ನಾಯಕರ ಈ ಟೀಕೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೇತ್ ಅವರು,‘ರಾಹುಲ್ ವಿರುದ್ಧ ಸಂಪೂರ್ಣ ಅಸಹ್ಯಕರ ಟೀಕೆಗಳನ್ನು ಮಾಡಿದ ಹಲವಾರು ನಿದರ್ಶನಗಳಿವೆ. ರಾಹುಲ್ ಐದು ಬಾರಿ ಚುನಾಯಿತ ಸಂಸದರಾಗಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ವಿಪಕ್ಷ ನಾಯಕನಾಗಿದ್ದಾರೆ. ಹಿಂಸಾಚಾರದಿಂದ ತುಂಬಿರುವ ಇಂತಹ ಹೇಳಿಕೆಗಳನ್ನು ಹೇಗೆ ಸಹಿಸಿಕೊಳ್ಳಬಹುದು? ಬಿಜೆಪಿ ಮತ್ತು ಮೈತ್ರಿಕೂಟದ ಪಾಲುದಾರರು ಇಂತಹ ಹಿಂಸಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದರೆ ಇದು ಮೋದಿ ಮತ್ತು ಶಾ ಅವರ ಸೂಚನೆಯ ಮೇರೆಗೇ ನಡೆಯುತ್ತಿದೆ. ಇದಕ್ಕೆ ಅವರ ಸಂಪೂರ್ಣ ರಾಜಕೀಯ ಕೃಪಾಕಟಾಕ್ಷವಿದೆ ಎಂದು ನಾನು ಹೇಳಲೇಬೇಕು’ ಎಂದರು.
‘ಜನರ ಧ್ವನಿಯನ್ನು ಎತ್ತಲು, ಅವರನ್ನು ಸಬಲಗೊಳಿಸಲು, ನಿರುದ್ಯೋಗ, ಬೆಲೆಯೇರಿಕೆ ಮತ್ತು ಆದಾಯದ ಅಸಮಾನತೆಯ ಕುರಿತು ಮಾತನಾಡಲು ಮತ್ತು ವಾಸ್ತವದಲ್ಲಿ ಅದಾನಿ ಹಗರಣ ಕುರಿತು ಅವರನ್ನು ಬಯಲಿಗೆಳೆಯಲು ರಾಹುಲ್ ಇದನ್ನೆಲ್ಲ ಸಹಿಸುತ್ತಿದ್ದಾರೆ. ಅವರು ದೇಶವನ್ನು ಒಗ್ಗೂಡಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಅವರು ಇದನ್ನೆಲ್ಲ ಲೆಕ್ಕಿಸುವುದಿಲ್ಲ. ಆದರೆ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಉಗ್ರರು ಹೇಗೆ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಅದರಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ನಾವು ಖಂಡಿತವಾಗಿಯೂ ಮೋದಿ ಮತ್ತು ಶಾ ಅವರನ್ನು ಪ್ರಶ್ನಿಸುತ್ತೇವೆ’ ಎಂದು ಶ್ರೀನೇತ್ ಹೇಳಿದರು.