ಹೂಡಿಕೆಗಳು ಮಹಾರಾಷ್ಟ್ರದಿಂದ ಗುಜರಾತ್‌ ಗೆ ಹರಿದಿರುವುದು ಸತ್ಯ : ಕಾಂಗ್ರೆಸ್

Update: 2024-11-12 14:41 GMT

ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ : ಮಹಾರಾಷ್ಟ್ರದಲ್ಲಿ ಮಾಡಬೇಕಾಗಿರುವ ಹೂಡಿಕೆಗಳನ್ನು ಗುಜರಾತ್‌ ಗೆ ವರ್ಗಾಯಿಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಗಳ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ, ಕಾಂಗ್ರೆಸ್ ಪಕ್ಷವು ಮಂಗಳವಾರ ತನ್ನ ನಾಯಕನನ್ನು ಸಮರ್ಥಿಸಿಕೊಂಡಿದೆ.

ರಾಹುಲ್ ಗಾಂಧಿ ರಾಜ್ಯಗಳ ನಡುವೆ ವೈಷಮ್ಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿದೆ.

ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದ ಹಲವು ಯೋಜನೆಗಳು ಮತ್ತು ಹೂಡಿಕೆಗಳನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ ಎಂದು ಮಂಗಳವಾರ ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದರು.

‘‘ಅವರು ಯಾವುದರ ಬಗ್ಗೆ ದೂರು ನೀಡುತ್ತಿದ್ದಾರೆ? ರಾಹುಲ್ ಗಾಂಧಿ ಏನು ಹೇಳಿದ್ದಾರೆ? ಅವರು ಹೇಳಿರುವುದನ್ನು ಪ್ರತಿಯೊಬ್ಬರೂ ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ ಬರಲು ನಿಗದಿಯಾಗಿದ್ದ ಹಲವಾರು ಯೋಜನೆಗಳು ಮತ್ತು ಹೂಡಿಕೆಗಳನ್ನು ಪ್ರಧಾನಿಯವರು ಗುಜರಾತ್‌ಗೆ ವರ್ಗಾಯಿಸಿದ್ದಾರೆ ಎಂಬುದಾಗಿ ಪತ್ರಿಕೆಗಳಲ್ಲಿ ಮುದ್ರಣವಾಗಿದೆ. ಅದನ್ನೇ ನಾವು ಹೇಳಿದ್ದೇವೆ. ನೀವು ಮಹಾರಾಷ್ಟ್ರದ ವಿರುದ್ಧ ತಾರತಮ್ಯ ಮಾಡುತ್ತಿದ್ದೀರಿ ಎಂದು ನಾವು ಹೇಳಿದ್ದೇವೆ’’ ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಮೇಶ್ ಹೇಳಿದರು.

‘‘ನೀವು (ಬಿಜೆಪಿ) ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂದು ಹೇಳುತ್ತಿದ್ದೀರಿ. ಹಾಗಾಗಿ, ಎಲ್ಲಾ ರಾಜ್ಯಗಳಿಗೂ ಅಭಿವೃದ್ಧಿಯನ್ನು ತನ್ನಿ’’ ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಮೂಲಸೌಕರ್ಯ ಇರುವ ಕಾರಣಕ್ಕಾಗಿ ಅಲ್ಲಿ ಹೂಡಿಕೆ ಮಾಡಲು ಬಯಸುವವರನ್ನು ಗುಜರಾತ್‌ ಗೆ ಹೋಗುವಂತೆ ಬೆದರಿಸಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ನುಡಿದರು. ‘‘ಗುಜರಾತ್‌ ಗೆ ಹೂಡಿಕೆಗಳು ಬಂದರೆ ನಾವು ಸ್ವಾಗತಿಸುತ್ತೇವೆ. ಆದರೆ, ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡಲು ಬಯಸುವವರನ್ನು ಗುಜರಾತ್‌ ಗೆ ಕಳುಹಿಸಬೇಡಿ’’ ಎಂದರು.

ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ನವೆಂಬರ್ 6ರಂದು ಆಡಿದ ಮಾತುಗಳಿಗೆ ಸಂಬಂಧಿಸಿ ಸೋಮವಾರ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ನೇತೃತ್ವದ ನಿಯೋಗವೊಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News