ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್ ಆಗ್ರಹ

Update: 2023-09-17 17:27 GMT

                                                                      ಜೈರಾಮ್ ರಮೇಶ್| Photo: PTI 

ಹೊಸದಿಲ್ಲಿ : ಸಂಸತ್‌ನ ಒಂದು ವಾರದ ಅವಧಿಯ ವಿಶೇಷ ಅಧಿವೇಶನವು ಸೋಮವಾರ ಆರಂಭಗೊಳ್ಳಲಿದ್ದು, ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮೀಸಲಾತಿ ವಿಧೇಯಕವನ್ನು ಜಾರಿಗೊಳಿಸಬೇಕೆಂದು ಕಾಂಗ್ರೆಸ್ ರವಿವಾರ ಆಗ್ರಹಿಸಿದೆ.

‘‘ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಆಗ್ರಹಿಸುತ್ತದೆ ’’ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ 1989ರ ಮೇನಲ್ಲಿ ಪಂಚಾಯತ್‌ಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಜಾರಿಗೊಳಿಸಿದ್ದರು. ಲೋಕಸಭೆಯಲ್ಲಿ ಅದು ಅಂಗೀಕಾರಗೊಂಡಿದ್ದರೂ, ರಾಜ್ಯಸಭೆಯಲ್ಲಿ ಬಿದ್ದು ಹೋಗಿತ್ತು. ಆನಂತರ ಪ್ರಧಾನಿ ಪಿ.ವಿ.ನರಸಿಂಹ ರಾವ್ ಪಂಚಾಯತ್ ಹಾಗೂ ನಗರಪಾಲಿಕೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮತ್ತೆ ಮಂಡಿಸಿದ್ದರು. ಉಭಯ ಸದನಗಳಲ್ಲಿಯೂ ಅದು ಅಂಗೀಕಾರಗೊಂಡು, ಕಾನೂನಾಗಿ ಮಾರ್ಪಟ್ಟಿತ್ತು. ಇದೀಗ ಪಂಚಾಯತ್ ಹಾಗೂ ನಗರಪಾಲಿಕೆಗಳಲ್ಲಿ 15 ಲಕ್ಷಕ್ಕೂ ಅಧಿಕ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಿದರು. ವಿಧೇಯಕವು 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಆದರೆ ಅದನ್ನು ಲೋಕಸಭೆಯಲ್ಲಿ ಮಂಡಿಸಲಿಲ್ಲ ಎಂದು ಜೈರಾಂ ರಮೇಶ್ ಹೇಳಿದರು.

ಮಹಿಳಾ ಮೀಸಲಾತಿ ವಿಧೇಯಕವು ಈಗಲೂ ಜೀವಂತವಾಗಿದೆ. ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ವಿಧೇಯಕವು ಲೋಕಸಭೆಯಲ್ಲಿಯೂ ಅಂಗೀಕಾರಗೊಳ್ಳಬೇಕಾಗಿದೆ’’ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News