ವಿಮಾನ ಪ್ರಯಾಣ ದರ ನಿಯಂತ್ರಿಸಲು ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ ಕಾಂಗ್ರೆಸ್ ಸಂಸದ ಶಫಿ ಪರಂಬಿಲ್
ಹೊಸದಿಲ್ಲಿ: ವಿಮಾನ ಪ್ರಯಾಣ ದರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಶುಕ್ರವಾರ ಕಾಂಗ್ರೆಸ್ ಸಂಸದ ಶಫಿ ಪರಂಬಿಲ್ ಅವರು ಲೋಕಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದರು.
ಕೊಲ್ಲಿ ದೇಶಗಳಲ್ಲಿ ದುಡಿಯುತ್ತಿರುವ ಬಹುತೇಕ ವಲಸೆ ಕಾರ್ಮಿಕರು ಕೌಶಲರಹಿತ ಅಥವಾ ಅರೆ ಕೌಶಲ ಕಾರ್ಮಿಕರಾಗಿದ್ದು, ಸೀಮಿತ ಆದಾಯವನ್ನು ಹೊಂದಿದ್ದಾರೆ. ರಜಾ ಋತುವಿನಲ್ಲಿ ವಿಮಾನ ಪ್ರಯಾಣ ದರಗಳನ್ನು ಬೇಕಾಬಿಟ್ಟಿ ಏರಿಕೆ ಮಾಡುವುದರಿಂದ ಅವರು ಭಾರಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ಕೇರಳದ ವಡಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಫಿ ಪರಂಬಿಲ್ ಆರೋಪಿಸಿದರು.
ಸಂಸದರು ಏರ್ ವಿಸ್ತಾರದಲ್ಲಿ ವಿಮಾನ ಟಿಕೆಟ್ ಗಳನ್ನು ಕಾಯ್ದಿರಿಸಲು ಮುಂದಾದಾಗ ಅಡ್ಡಾದಿಡ್ಡಿಯಾಗಿ ದರ ಏರಿಕೆ ಮಾಡಿರುವುದು ಕಂಡು ಬಂದಿದೆ ಎಂಬ ಆರೋಪಗಳ ಕುರಿತು ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ವಿಮಾನ ಯಾನ ಇಲಾಖೆಯ ರಾಜ್ಯ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಭರವಸೆ ನೀಡಿದ ಬೆನ್ನಿಗೇ ಈ ಖಾಸಗಿ ಮಸೂದೆ ಮಂಡನೆಯಾಗಿದೆ.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪರಂಬಿಲ್, “ನಿನ್ನೆ(ಗುರುವಾರ)ಯ ಪ್ರಶ್ನೋತ್ತರ ಕಲಾಪದಲ್ಲಿ ಈ ಸದನವು ಕೆಲ ನಿಮಿಷವಾದರೂ ನಮ್ಮ ಸಹೋದ್ಯೋಗಿಗಳು ಎದುರಿಸಿದ ದುಬಾರಿ ಪ್ರಯಾಣ ದರ ಹಾಗೂ ಸುಲಿಗೆಯ ಕುರಿತು ಚರ್ಚಿಸಲಾಗಿದೆ. ಕುಟುಂಬದ ಮಾಸಾಂತ್ಯದ ಖರ್ಚನ್ನು ನಿಭಾಯಿಸಲೇ ಹೆಣಗಾಡುತ್ತಿರುವ ನಮ್ಮ ಸಹೋದರರು, ಸಹೋದರಿಯರು, ಪತಿ ಹಾಗೂ ಪತ್ನಿ, ಕುಟುಂಬದ ಇನ್ನಿತರ ಸದಸ್ಯರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಅವರ ಮೇಲೆ ಹೊರೆ ಹೇರಲಾಗುತ್ತಿದೆ” ಎಂದು ಆರೋಪಿಸಿದರು.
“ಈ ಪ್ರವೃತ್ತಿ ನಿಲ್ಲಬೇಕಿದೆ. ನಾವು ಈ ಕುರಿತು ಆಡಳಿತಾತ್ಮಕ ಹಾಗೂ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಮೂಲಕ ಈ ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ. ನಿರ್ದಿಷ್ಟ ಮಾರ್ಗದಲ್ಲಿನ ವಿಮಾನ ಪ್ರಯಾಣದ ಗರಿಷ್ಠ ದರವು ಸಕಾರಣವಾಗಿರುವಂತೆ ಸರಕಾರವು ಸೂಕ್ತ ಕ್ರಮಗಳ ಮೂಲಕ ವಿಮಾನ ಪ್ರಯಾಣ ದರವನ್ನು ನಿಯಂತ್ರಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಅವರು ಒತ್ತಾಯಿಸಿದರು.
ಸಂಸದರು ಸಂಸತ್ತಿನಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಲು ಅವಕಾಶವಿದ್ದು, ಇಂತಹ ಮಸೂದೆಯ ಕುರಿತು ಸದನವು ಚರ್ಚಿಸುತ್ತದೆ ಹಾಗೂ ನಂತರ ಸರಕಾರವು ಪ್ರತಿಕ್ರಿಯೆ ನೀಡುತ್ತದೆ.