ರಾಹುಲ್ ಗಾಂಧಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಗೆ ಕಾಂಗ್ರೆಸ್ ತಿರುಗೇಟು

Update: 2024-09-16 13:51 GMT

 ಜಗದೀಪ್ ಧನಕರ್ , ರಾಹುಲ್ ಗಾಂಧಿ | PTI

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಉಪ ರಾಷ್ಟ್ರಪತಿ ಹುದ್ದೆಯು ಪಕ್ಷಾತೀತವಾದುದಾಗಿದೆ ಎಂದು ಕುಟುಕಿದೆ.

ರಾಹುಲ್ ಗಾಂಧಿ ಅಮೆರಿಕದಲ್ಲಿ ನೀಡಿದ್ದ ಹೇಳಿಕೆಯ ವಿರುದ್ಧ ಶುಕ್ರವಾರ ತೀಕ್ಷ್ಣ ವಾಗ್ದಾಳಿ ನಡೆಸಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯೊಬ್ಬ ವಿದೇಶದಲ್ಲಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಮರೆತಂತೆ ವರ್ತಿಸಿದ್ದಾರೆ. ಆ ಮೂಲಕ ದೇಶದ ಹಿತಾಸಕ್ತಿಯನ್ನು ನಿರ್ಲಕ್ಷಿಸಿದ್ದು, ದೇಶದ ಸಾಂವಿಧಾನಿಕ ಸಂಸ್ಥೆಗಳ ಘನತೆಗೆ ಚೂರಿ ಇರಿದಿದ್ದಾರೆ ಎಂದು ಕಿಡಿ ಕಾರಿದ್ದರು.

ರವಿವಾರ ನಡೆದ ಮತ್ತೊಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಜಗದೀಪ್ ಧನಕರ್, ಅಮೆರಿಕದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಕಟುವಾಗಿ ಖಂಡಿಸಿ, ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್, “ನೀವು ತಪ್ಪು ತಿಳಿದುಕೊಂಡಿದ್ದೀರಿ ಎನಿಸುತ್ತಿದೆ. ಉಪ ರಾಷ್ಟ್ರಪತಿಯವರ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿದೆ. ನರೇಂದ್ರ ಮೋದಿಯವರು ಚೀನಾಗೆ ತೆರಳಿದಾಗ, 2014ಕ್ಕೂ ಮುಂಚೆ ಭಾರತದಲ್ಲಿ ಜನಿಸಿದವರು ತಮ್ಮ ಹಣೆಬರಹಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಹೇಳುವ ಮೂಲಕ ವಿದೇಶದ ನೆಲದಲ್ಲಿ ಭಾರತದ ಗೌರವಕ್ಕೆ ಚ್ಯುತಿ ತಂದಿದ್ದರು. ಅವರು ದಕ್ಷಿಣ ಕೊರಿಯ, ಕೆನಡಾ, ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ಗೆ ತೆರಳಿದ್ದಾಗಲೂ ಅದನ್ನೇ ಮಾಡಿದ್ದರು” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಮೀಸಲಾತಿ ಕುರಿತ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಟೀಕೆಗೆ ತಿರುಗೇಟು ನೀಡಿರುವ ಸುಪ್ರಿಯಾ ಶ್ರೀನೇತ್, ಜಾತಿ ಗಣತಿಯನ್ನು ದುರಹಂಕಾರದಿಂದ ವಿರೋಧಿಸುತ್ತಿರುವವರು ಮೀಸಲಾತಿ ವಿರೋಧಿಗಳೋ ಅಥವಾ ಜಾತಿ ಗಣತಿಗಾಗಿ ಆಗ್ರಹಿಸುತ್ತಿರುವವರೊ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News