ಎಂಟು ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ರಚಿಸಿದ ಕಾಂಗ್ರೆಸ್

Update: 2024-01-07 17:23 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ರಾಜಸ್ಥಾನ, ಕೇರಳ, ತೆಲಂಗಾಣ, ಛತ್ತೀಸ್ ಗಡ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ ಸೇರಿದಂತೆ ಎಂಟು ರಾಜ್ಯಗಳಿಗಾಗಿ ಚುನಾವಣಾ ಸಮಿತಿಗಳನ್ನು ರಚಿಸಿದೆ. ಜೊತೆಗೆ ಮಧ್ಯಪ್ರದೇಶಕ್ಕಾಗಿ ರಾಜಕೀಯ ವ್ಯವಹಾರಗಳ ಸಮಿತಿಯನ್ನೂ ಅಸ್ತಿತ್ವಕ್ಕೆ ತಂದಿದೆ.

ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ ಅವರನ್ನು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಹಾಗೂ ಮಾಜಿ ಕೇಂದ್ರ ಸಚಿವರಾದ ಸಚಿನ್ ಪೈಲಟ್ ಮತ್ತು ಜಿತೇಂದ್ರ ಸಿಂಗ್ ಅವರು ಸಮಿತಿಯ ಸದಸ್ಯರಲ್ಲಿ ಸೇರಿದ್ದಾರೆ. ಯುವ ಕಾಂಗ್ರೆಸ್ ಮತ್ತು ಎನ್ ಎಸ್ ಯು ಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು,ಪ್ರ ದೇಶ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಕೂಡ ಸಮಿತಿಯ ಸದಸ್ಯರಾಗಿದ್ದಾರೆ.

ಕೇರಳದಲ್ಲಿ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಕೆ.ಸುಧಾಕರನ್ ಅವರನ್ನು ನೇಮಕಗೊಳಿಸಲಾಗಿದೆ. ಎ.ಕೆ. ಆ್ಯಂಟನಿ, ಕೆ.ಸಿ.ವೇಣುಗೋಪಾಲ್, ರಮೇಶ್ ಚೆನ್ನಿತಲ, ವಯಲಾರ್ ರವಿ, ವಿ.ಡಿ.ಸತೀಶನ್, ಕೆ.ಸುರೇಶ್, ಶಶಿ ತರೂರ್ ಮತ್ತು ಮುಲ್ಲಪಳ್ಳಿ ರಾಮಚಂದ್ರನ್ ಅವರಂತಹ ಹಿರಿಯ ನಾಯಕರು ಸಮಿತಿಯ ಸದಸ್ಯರಲ್ಲಿ ಸೇರಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿಯವರ ನೇತೃತ್ವದಲ್ಲಿ ರಚಿಸಲಾಗಿರುವ ಪ್ರದೇಶ ಚುನಾವಣಾ ಸಮಿತಿಯಲ್ಲಿ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಉತ್ತಮ ಕುಮಾರ ರೆಡ್ಡಿ ಮತ್ತು ವಿ.ಹನುಮಂತರಾವ್ ಮತ್ತಿತರರು ಸದಸ್ಯರಾಗಿದ್ದಾರೆ.

ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರನ್ನು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಕೇಶ ಅಗ್ನಿಹೋತ್ರಿ, ಹಿರಿಯ ನಾಯಕರಾದ ಆನಂದ ಶರ್ಮಾ, ವಿಪ್ಲವ್ ಠಾಕೂರ್ ಮತ್ತಿತರ ಹಿರಿಯ ನಾಯಕರು ಸದಸ್ಯರಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಜಿತು ಪಟ್ವಾರಿ ಅವರು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದು, ದಿಗ್ವಿಜಯ ಸಿಂಗ್, ವಿವೇಕ ತಾಂಖಾ, ಸುರೇಶ ಪಚೌರಿ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ಮತ್ತಿತರರು ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ ಎಐಸಿಸಿ ಉಸ್ತುವಾರಿಯಾಗಿರುವ ಜಿತೇಂದ್ರ ಸಿಂಗ್ ಅವರು ಮಧ್ಯಪ್ರದೇಶ ರಾಜಕೀಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪಟ್ವಾರಿ ಸಮಿತಿಯ ಸಂಚಾಲಕರಾಗಿದ್ದು, ಕಮಲನಾಥ್, ದಿಗ್ವಿಜಯ ಸಿಂಗ್, ನಕುಲನಾಥ್ ಮತ್ತಿತರರು ಸದಸ್ಯರಾಗಿದ್ದಾರೆ.

ಛತ್ತೀಸ್ ಗಡದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಅವರು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದು, ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್, ಮಾಜಿ ಉಪ ಮುಖ್ಯಮಂತ್ರಿ ಟಿ.ಎಸ್.ಸಿಂಗದೇವ್ ಮತ್ತಿತರರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.

ಮಣಿಪುರದಲ್ಲಿ ಕೆ.ಮೇಘಚಂದ್ರ ಸಿಂಗ್ ಅವರು ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದು, ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್, ಮಾಜಿ ಉಪಮುಖ್ಯಮಂತ್ರಿ ಗೈಖಾಂಗಮ್ ಅವರು ಸದಸ್ಯರಲ್ಲಿ ಸೇರಿದ್ದಾರೆ.

ಎಸ್.ಸುಪೊಂಗ್ಮೆರೆನ್ ಝಮೀರ್ ಅವರು ನಾಗಾಲ್ಯಾಂಡ್ ಮತ್ತು ಆಶಿಷ್ ಕುಮಾರ್ ಸಹಾ ಅವರು ತ್ರಿಪುರಾ ಪ್ರದೇಶ ಚುನಾವಣಾ ಸಮಿತಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News