ಜೆಪಿಸಿ ತನಿಖೆಗೆ ಬೇಡಿಕೆ ನೆಪದಲ್ಲಿ ಕಾಂಗ್ರೆಸ್ ಷೇರು ಮಾರುಕಟ್ಟೆ ಪತನವನ್ನು ಬಯಸಿದೆ : ಬಿಜೆಪಿ

Update: 2024-08-12 16:36 GMT

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ | PC : PTI 


ಹೊಸದಿಲ್ಲಿ : ಸೆಬಿ ಅಧ್ಯಕ್ಷೆ ವಿರುದ್ಧ ಹಿಂಡೆನ್‌ ಬರ್ಗ್‌ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಕಾಂಗ್ರೆಸ್ ಬೇಡಿಕೆಯನ್ನು ಸೋಮವಾರ ತಿರಸ್ಕರಿಸಿರುವ ಬಿಜೆಪಿ, ತನಿಖೆಗೆ ಬೇಡಿಕೆಯು ಭಾರತೀಯ ಆರ್ಥಿಕತೆಯನ್ನು ದುರ್ಬಲಗೊಳಿಸಲು ಮತ್ತು ದೇಶದಲ್ಲಿ ಹೂಡಿಕೆಯನ್ನು ನಾಶ ಮಾಡಲು ಒಂದು ನೆಪವಾಗಿದೆ ಅಷ್ಟೇ ಎಂದು ಹೇಳಿದೆ.

ಹಿಂಡೆನ್‌ ಬರ್ಗ್‌ ಆರೋಪಗಳು ಮತ್ತು ಸೆಬಿ ವಿರುದ್ಧ ಪ್ರತಿಪಕ್ಷ ಟೀಕೆಗಳು ವ್ಯಾಪಕ ಷಡ್ಯಂತ್ರದ ಭಾಗವಾಗಿವೆ ಎಂಬ ಪಕ್ಷದ ನಿಲುವನ್ನು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪುನರುಚ್ಚರಿಸಿದರು.

ಭಾರತವನ್ನು ಜಾಗತಿಕವಾಗಿ ಸುರಕ್ಷಿತ,ಸ್ಥಿರ ಮತ್ತು ಭರವಸೆದಾಯಕ ಮಾರುಕಟ್ಟೆಯಾಗಿ ನೋಡುತ್ತಿರುವಾಗ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಹೂಡಿಕೆ ಸುರಕ್ಷಿತವಲ್ಲ ಎಂದು ಬಿಂಬಿಸಲು ಮುಂದಾಗಿದೆ. ಅದು ಆರ್ಥಿಕತೆಗೆ ಹಾನಿಯನ್ನುಂಟು ಮಾಡಲು ವಿದೇಶಿ ಸಂಸ್ಥೆಗಳು ಒದಗಿಸುತ್ತಿರುವ ‘ಚಿಟ್’ಗಳನ್ನು ನೆಚ್ಚಿಕೊಂಡಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್ ಆರೋಪಿಸಿದರು.

ಬಿಲಿಯಾಧೀಶ ಹೂಡಿಕೆದಾರ ಜಾರ್ಜ್ ಸೊರೋಸ್ ಹಿಂಡೆನ್‌ ಬರ್ಗ್‌ನಲ್ಲಿ ಹೂಡಿಕೆಯನ್ನು ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಅಪಪ್ರಚಾರಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಪ್ರಸಾದ್ ಹೇಳಿದರು.

ಕೋಟ್ಯಂತರ ಸಣ್ಣ ಹೂಡಿಕೆದಾರರಿಗೆ ಉತ್ತಮ ಪ್ರತಿಫಲವನ್ನು ನೀಡಿರುವ ಷೇರು ಮಾರುಕಟ್ಟೆ ಕುಸಿಯಬೇಕು ಎಂದು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ ಪ್ರಸಾದ್, ಜನರಿಂದ ತಿರಸ್ಕರಿಸಲ್ಪಟ್ಟ ನಂತರ ಕಾಂಗ್ರೆಸ್, ಅದರ ಮಿತ್ರಪಕ್ಷಗಳು ಮತ್ತು ಟೂಲ್‌ ಕಿಟ್ ಗ್ಯಾಂಗ್‌ ನಲ್ಲಿಯ ಅದರ ನಿಕಟ ಮಿತ್ರರು ಒಟ್ಟಾಗಿ ಭಾರತದಲ್ಲಿ ಆರ್ಥಿಕ ಅರಾಜಕತೆ ಮತ್ತು ಅಸ್ಥಿರತೆಯನ್ನುಂಟು ಮಾಡಲು ಷಡ್ಯಂತ್ರ ರಚಿಸಿದ್ದಾರೆ ಎಂದರು.

2004 ಮತ್ತು 2014ರ ನಡುವಿನ 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಹಲವಾರು ಹಗರಣಗಳು ನಡೆದಿದ್ದವು ಎಂದು ಬೆಟ್ಟು ಮಾಡಿದ ಪ್ರಸಾದ,ಆಗೇಕೆ ಇಂತಹ ವರದಿಗಳು ಬಿಡುಗಡೆಗೊಂಡಿರಲಿಲ್ಲ ಎಂದು ಪ್ರಶ್ನಿಸಿದರು.

ಈ ಕಾಲ್ಪನಿಕ ವರದಿಯನ್ನು ನೆಚ್ಚಿಕೊಂಡು ಕಾಂಗ್ರೆಸ್ ಪಕ್ಷವು ಆರ್ಥಿಕ ಅರಾಜಕತೆಯನ್ನು ಸೃಷ್ಟಿಸುವಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ ಅವರು, ಆದರೆ ಹೂಡಿಕೆದಾರರು ಈ ಷಡ್ಯಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಮಾರುಕಟ್ಟೆಗೆ ಹೊಡೆತ ನೀಡುವ ಪ್ರಯತ್ನಗಳನ್ನು ತಿರಸ್ಕರಿಸಿದ್ದಾರೆ ಎಂದು ಪ್ರತಿಪಾದಿಸಿದರು.

ಅದಾನಿ ಗ್ರೂಪ್ ವಿರುದ್ಧದ ತನ್ನ ತನಿಖೆಯ ಭಾಗವಾಗಿ ಸೆಬಿ ಅಮೆರಿಕ ಮೂಲದ ಹಿಂಡೆನ್‌ ಬರ್ಗ್‌ ರೀಸರ್ಚ್‌ಗೆ ನೋಟಿಸ್ ಕಳುಹಿಸಿದೆ. ಹಿಂಡನ್‌ ಬರ್ಗ್ ಅದಕ್ಕೆ ಉತ್ತರಿಸಿಲ್ಲ. ಬದಲಿಗೆ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ದಾಳಿಯನ್ನು ಆರಂಭಿಸಿದೆ ಎಂದರು.

ಹಿಂಡೆನ್‌ ಬರ್ಗ್‌ ವರದಿ ಕುರಿತು ಸರಕಾರದ ವಿರುದ್ಧ ತನ್ನ ಪಕ್ಷದ ದಾಳಿಯ ನೇತೃತ್ವವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಹಿಸಿರುವ ಹಿನ್ನೆಲೆಯಲ್ಲಿ ಪ್ರಸಾದ್, ಅವರು ಆಧಾರರಹಿತ ಆರೋಪಗಳನ್ನು ಮಾಡುವ ಚಾಳಿಯನ್ನು ಹೊಂದಿದ್ದಾರೆ. ಪೆಗಾಸಿಸ್ ವಿಷಯದಲ್ಲಿ ತನಿಖೆಗೆ ಆದೇಶಿಸಿದ ಬಳಿಕ ಅವರು ತನ್ನ ಫೋನ್‌ನ್ನು ಎಂದೂ ತನಿಖೆಗೆ ಒಪ್ಪಿಸಿರಲಿಲ್ಲ ಎಂದು ಬೆಟ್ಟು ಮಾಡಿದರು. ಬಿಜೆಪಿಯು ಕಾಂಗ್ರೆಸ್‌ನ್ನು ಬಯಲಿಗೆಳೆಯಲಿದೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News