ಕಾಂಗ್ರೆಸ್ ಧರ್ಮಾಧಾರಿತವಾಗಿ ಬಜೆಟ್ ಮೀಸಲಿಡಲು ಬಯಸುತ್ತಿದೆ : ಪ್ರಧಾನಿ ಮೋದಿ ಆರೋಪ

Update: 2024-05-15 16:28 GMT

ನರೇಂದ್ರ ಮೋದಿ | PC : PTI 

ನಾಶಿಕ್: ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ಬಜೆಟ್‌ನಲ್ಲಿ ಶೇ. 15ರಷ್ಟನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲು ಬಯಸುತ್ತಿದೆ ಎಂದು ಬುಧವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಧರ್ಮಾಧಾರಿತವಾಗಿ ಬಜೆಟ್ ಅಥವಾ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿಯನ್ನು ವಿಭಜಿಸಲು ನಾನೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆಗೈದರು.

2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ತನ್ನ ಅಚ್ಚುಮೆಚ್ಚಿನ ಮತ ಬ್ಯಾಂಕ್ ಆದ ಅಲ್ಪಸಂಖ್ಯಾತರಿಗೆ ವಿನಿಯೋಗಿಸಲು ಬಯಸಿತ್ತು. ಆದರೆ, ಬಿಜೆಪಿಯ ಪ್ರಬಲವಾದ ವಿರೋಧದಿಂದಾಗಿ ಆ ಪ್ರಸ್ತಾಪವನ್ನು ಹಿಂಪಡೆಯಿತಾದರೂ, ಆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲಿಲ್ಲ ಎಂದು ಅವರು ಆರೋಪಿಸಿದರು.

ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳಾದ ಕೇಂದ್ರ ಸಚಿವೆ ಭಾರತಿ ಪವಾರ್ (ಬಿಜೆಪಿ) ಹಾಗೂ ಹೇಮಂತ್ ಗೋಡ್ಸೆ (ಶಿವಸೇನೆ) ಪರವಾಗಿ ಉತ್ತರ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಪಿಂಪಲ್‌ಗಾಂವ್‌ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಧರ್ಮದ ಆಧಾರದಲ್ಲಿ ಬಜೆಟ್ ಅನ್ನು ವಿಭಜಿಸುವುದು ಅಪಾಯಕಾರಿ" ಎಂದು ಹೇಳಿದರು.

"ನಾವು ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಎಲ್ಲರಿಗೂ ನೀಡುತ್ತೇವೆ. ಆದರೆ, ಬಜೆಟ್ ಅನ್ನು ಧರ್ಮಾಧಾರಿತವಾಗಿ ವಿಭಜಿಸಿ, ಹಂಚಲು ಕಾಂಗ್ರೆಸ್ ಬಯಸುತ್ತಿದೆ. ಅವರು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು ಹಾಗೂ ಆ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ಅಭ್ಯರ್ಥಿಯಾದ ಭಾರತಿ ಪವಾರ್ ಹಾಗೂ ಶಿವಸೇನೆಯ ಅಭ್ಯರ್ಥಿಯಾದ ಹೇಮಂತ್ ಗೋಡ್ಸೆ ಕ್ರಮವಾಗಿ ದಿಂಡೋರಿ ಹಾಗೂ ನಾಶಿಕ್ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಮೇ 20ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಐದನೆ ಮತ್ತು ಕೊನೆಯ ಹಂತದ ಚುನಾವಣೆಯ ಸಂದರ್ಭದಲ್ಲಿ ಮತದಾನ ನಡೆಯಲಿರುವ 13 ಲೋಕಸಭಾ ಕ್ಷೇತ್ರಗಳ ಪೈಕಿ ಈ ಎರಡು ಕ್ಷೇತ್ರಗಳೂ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News