ಕಾಂಗ್ರೆಸ್ 50 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದಿಲ್ಲ, ಚುನಾವಣೆಯ ನಂತರ ವಿರೋಧ ಪಕ್ಷದ ಸ್ಥಾನಮಾನವನ್ನೂ ಪಡೆಯುವುದಿಲ್ಲ: ಪ್ರಧಾನಿ ಮೋದಿ
ಫೂಲ್ಬನಿ (ಒಡಿಶಾ): ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 50 ಸ್ಥಾನಗಳನ್ನೂ ಗಳಿಸುವುದಿಲ್ಲ ಹಾಗೂ ಚುನಾವಣೆಯ ನಂತರ ವಿರೋಧ ಪಕ್ಷದ ಸ್ಥಾನ ಗಳಿಸಲೂ ಸಾಧ್ಯವಾಗುವುದಿಲ್ಲ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಒಡಿಶಾದ ಕಂಧಮಲ್ ಲೋಕಸಭಾ ಕ್ಷೇತ್ರದ ಫೂಲ್ಬನಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ರಾಜ್ಯದಲ್ಲಿ ಡಬಲ್ ಎಂಜಿನ್ ಸರಕಾರ ರಚನೆಯಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿ, "ಒಡಿಶಾದ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದಿರುವ ಮಣ್ಣಿನ ಮಗ ಅಥವಾ ಮಗಳು ಬಿಜೆಪಿ ಸರಕಾರದ ಮುಖ್ಯಮಂತ್ರಿ ಆಗಲಿದ್ದಾರೆ" ಎಂದು ಭರವಸೆ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಕೇಂದ್ರದಲ್ಲಿನ ಈ ಹಿಂದಿನ ಬಿಜೆಪಿ ಸರಕಾರದ ಸಾಧನೆಗಳನ್ನು ಸ್ಮರಿಸಿದ ಅವರು, 26 ವರ್ಷಗಳ ಹಿಂದೆ ಇದೇ ದಿನ ನಡೆದಿದ್ದ ಪೋಖ್ರಾನ್ ಅಣು ಬಾಂಬ್ ಪರೀಕ್ಷೆಯಿಂದ ದೇಶದ ವರ್ಚಸ್ಸು ಜಾಗತಿಕ ಮಟ್ಟದಲ್ಲಿ ವರ್ಧಿಸಿತ್ತು ಎಂದು ಹೇಳಿದರು.
ರಾಮಮಂದಿರವನ್ನು ನಿರ್ಮಿಸುವ ಮೂಲಕ ನಮ್ಮ ಸರಕಾರವು ಜನರ 500 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿತು ಎಂದೂ ಅವರು ಪ್ರತಿಪಾದಿಸಿದರು.