ಪೆಟ್ರೋಲ್ ಪಂಪ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ 1 ಕಿಮೀ ಎಳೆದೊಯ್ದ ಪೊಲೀಸ್ ಅಧಿಕಾರಿ; ವಿಡಿಯೊ ವೈರಲ್

Update: 2024-07-15 10:59 GMT

Photo credit: english.mathrubhumi.com

ಕಣ್ಣೂರು (ಕೇರಳ): ಪೆಟ್ರೋಲ್ ಬಿಲ್ ಪಾವತಿ ವಿಚಾರದಲ್ಲಿ ಜಗಳ ನಡೆದು, ಪೊಲೀಸ್ ಅಧಿಕಾರಿಯೊಬ್ಬರು ಪೆಟ್ರೋಲ್ ಪಂಪ್ ಸಿಬ್ಬಂದಿಯೊಬ್ಬರನ್ನು ಒಂದು ಕಿಮೀ ದೂರ ತಮ್ಮ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಪೊಲೀಸ್ ಮೆಸ್ ದರ್ಜೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಸಂತೋಷ್ ಕುಮಾರ್ (50) ಹಾಗೂ ಕಣ್ಣೂರು ಜಿಲ್ಲೆಯ ತಲಪ್‌ನಲ್ಲಿರುವ ಎನ್‌ಕೆಬಿಟಿ ಪೆಟ್ರೋಲ್ ಪಂಪ್ ಸಿಬ್ಬಂದಿಯಾದ ಅನಿಲ್ ನಡುವೆ ಪೆಟ್ರೋಲ್ ಬಿಲ್ ಮೊತ್ತವಾದ ರೂ. 2,100 ಪಾವತಿಗೆ ಸಂಬಂಧಿಸಿದಂತೆ ರವಿವಾರ ಮಧ್ಯಾಹ್ನ ಸುಮಾರು 3.30ರ ವೇಳೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಅನಿಲ್ ಮೇಲೆ ಹಲ್ಲೆ ನಡೆಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಸಂತೋಷ್ ಕುಮಾರ್ ತಮ್ಮ ಕಾರನ್ನು ದಿಢೀರನೆ ವೇಗವಾಗಿ ಚಲಾಯಿಸಿದ್ದು, ಇದರಿಂದ ಕಾರಿನ ಎದುರಿಗೆ ನಿಂತಿದ್ದ ಅನಿಲ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಹೀಗಿದ್ದೂ, ಜನನಿಬಿಡ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರನ್ನು ನಿಲ್ಲಿಸದೆ ಸುಮಾರು ಒಂದು ಕಿಮೀ ದೂರ ಚಲಾಯಿಸಿದ್ದಾರೆ ಸಂತೋಷ್ ಕುಮಾರ್. ಅದೃಷ್ಟವಶಾತ್ ಅನಿಲ್ ಕೈಗೆ ಸಣ್ಣಪುಟ್ಟ ಗಾಯ ಮಾತ್ರವಾಗಿದೆ.

ಒಂದು ವೇಳೆ ನಾನು ಬಾನೆಟ್ ಅನ್ನು ಹಿಡಿದುಕೊಳ್ಳದೆ ಹೋಗಿದ್ದರೆ ನಾನು ನನ್ನ ಜೀವವನ್ನು ಕಳೆದುಕೊಂಡಿರುತ್ತಿದ್ದೆ ಎಂದು ಅನಿಲ್ ಹೇಳಿದ್ದಾರೆ.

ಅನಿಲ್ ದೂರನ್ನು ಆಧರಿಸಿ ಸಂತೋಷ್ ಕುಮಾರ್ ವಿರುದ್ಧ ಹತ್ಯಾ ಪ್ರಯತ್ನದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ತನಿಖೆ ಬಾಕಿ ಇದೆ ಎಂದು ಕಣ್ಣೂರು ಪೊಲೀಸ್ ಆಯುಕ್ತ ಅಜಿತ್ ಕುಮಾರ್ ದೃಢಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News