ಚುನಾವಣಾ ಬಾಂಡ್ ಗಳ ಮೂಲಕ ಭ್ರಷ್ಟಾಚಾರ | ತನಿಖೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳ ದತ್ತಾಂಶಗಳ ಆಧಾರದಲ್ಲಿ ಕಂಪನಿಗಳು,ರಾಜಕೀಯ ಪಕ್ಷಗಳು ಮತ್ತು ಸರಕಾರಿ ಏಜೆನ್ಸಿಗಳ ನಡುವೆ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆಯ ಆರೋಪದ ಕುರಿತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ನಡೆಸುವಂತೆ ಕೋರಿ ಲಾಭೇತರ ಗುಂಪುಗಳಾದ ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಸರ್ವೋಚ್ಚ ನ್ಯಾಯಾಲಯಕ್ಕೆ ಜಂಟಿ ಅರ್ಜಿಯನ್ನು ಸಲ್ಲಿಸಿವೆ.
ಫೆ.15ರಂದು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಅದು ಮಾಹಿತಿ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಹಾಗೂ ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆಗಳಿಗೆ ಕಾರಣವಾಗಬಹುದು ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.
ತನಿಖೆಯು ಚುನಾವಣಾ ಬಾಂಡ್ ಗಳ ಯೋಜನೆಯ ಮೂಲಕ ನಡೆಸಲಾದ ಆರೋಪಿತ ಪಿತೂರಿಗಳು ಮತ್ತು ಹಗರಣಗಳನ್ನು ಬಹಿರಂಗಗೊಳಿಸುತ್ತದೆ ಎಂದು ಜಂಟಿ ಅರ್ಜಿಯು ಪ್ರತಿಪಾದಿಸಿದೆ.
ಕಂಪನಿಗಳು ಹೆಚ್ಚಿನ ಬಾಂಡ್ ಗಳನ್ನು ಕೊಟ್ಟು ತೆಗೆದುಕೊಳ್ಳುವ ಸಾಧನಗಳಾಗಿ ರಾಜಕೀಯ ಪಕ್ಷಗಳಿಗೆ ನೀಡಿವೆ ಎನ್ನುವುದನ್ನು ದತ್ತಾಂಶಗಳ ವಿಶ್ಲೇಷಣೆಯು ತೋರಿಸಿದೆ ಎಂದು ಅರ್ಜಿಯು ವಾದಿಸಿದೆ.
ದೇಣಿಗೆಯನ್ನು ನೀಡಿ ಪ್ರತಿಫಲವನ್ನು ಪಡೆಯುವ ವ್ಯವಸ್ಥೆಯು ಭ್ರಷ್ಟಾಚಾರ ಕಾಯ್ದೆ, 1988ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಅರ್ಜಿದಾರರು ಹೇಳಿದ್ದಾರೆ.
ಸರಕಾರಗಳಿಂದ ಕೋಟ್ಯಂತರ ರೂ.ಗಳ ಗುತ್ತಿಗೆಗಳು, ಪರವಾನಿಗೆಗಳು,ಲೀಸ್ಗಳು,ಅನುಮತಿಗಳು ಮತ್ತು ಇತರ ಲಾಭಗಳನ್ನು ಪಡೆಯಲು ದಾನಿಗಳು ಚುನಾವಣಾ ಬಾಂಡ್ ಗಳನ್ನು ನೀಡಿದ್ದು,ಈ ಸರಕಾರಗಳನ್ನು ಬಾಂಡ್ ಗಳನ್ನು ಸ್ವೀಕರಿಸಿದ್ದ ರಾಜಕೀಯ ಪಕ್ಷಗಳು ನಿಯಂತ್ರಿಸುತ್ತಿದ್ದವು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನಿಯಂತ್ರಿಸುವ ಕಂಪನಿಗಳ ಕಾಯ್ದೆಯನ್ನೂ ಉಲ್ಲಂಘಿಸಿವೆ. ಮೂರು ವರ್ಷಗಳಿಗಿಂತ ಕಡಿಮೆ ಹಳೆಯದಾದ ಕಂಪನಿಗಳು ಕಾಯ್ದೆಯಡಿ ದೇಣಿಗೆಗಳನ್ನು ನೀಡಲು ಅವಕಾಶವಿಲ್ಲವಾದರೂ ಅವೂ ದೇಣಿಗೆಗಳನ್ನು ನೀಡಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯಲ್ಲಿ ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿ.,ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ ಪಿಆರ್,ಗ್ರಾಸಿಮ್ ಇಂಡಸ್ಟ್ರೀಸ್ ನಂತಹ ಕಂಪನಿಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆಯ ಭಾಗವನ್ನಾಗಿ ಹೆಸರಿಸಲಾಗಿದೆ.