ನಕಲಿ ಮತ್ತು ಪ್ರೇರಿತ ಸುದ್ದಿಗಳ ನಿಯಂತ್ರಣಕ್ಕೆ ಕೇಂದ್ರದಿಂದ ಪ್ರಮಾಣಿತ ಕಾರ್ಯ ವಿಧಾನ
ಹೊಸದಿಲ್ಲಿ: ಮಾಧ್ಯಮ ಸಂಬಂಧಿತ ಕಳವಳಗಳಿಗೆ ಸ್ಪಂದಿಸಲು ಎಲ್ಲ ಸರಕಾರಿ ಇಲಾಖೆಗಳಿಗಾಗಿ ವಿವರವಾದ ‘ಬಹುಸ್ತರಗಳ’ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ)ವನ್ನು ಕೇಂದ್ರ ಸರಕಾರವು ರೂಪಿಸುತ್ತಿದೆ. ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯಿಂದ ಹಿಡಿದು ಪ್ರೇರಿತ ಟೀಕೆಯವರೆಗೆ, ದಾರಿ ತಪ್ಪಿಸುವ, ತಿರುಚಿದ ಮತ್ತು ನಿಖರವಲ್ಲದ ವಿಷಯಗಳು ಹಾಗೂ ಅಭಿಪ್ರಾಯದ ಸುದ್ದಿ ಮತ್ತು ತಪ್ಪು ಸಂವಹನ ಇತ್ಯಾದಿಗಳು ಮಾಧ್ಯಮ ಸಂಬಂಧಿತ ಕಳವಳಗಳಲ್ಲಿ ಸೇರಿವೆ.
ಎಸ್‌ಒಪಿಗಳನ್ನು ರೂಪಿಸುವ ಕಾರ್ಯವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಕೂಲ ಘಟನೆಗಳನ್ನು ನಿಭಾಯಿಸಲು ಕೇಂದ್ರ ಸಚಿವಾಲಯಗಳಿಗಾಗಿ ಪ್ರತಿಕ್ರಿಯಾ ಕಾರ್ಯತಂತ್ರ ಕುರಿತು ಮಾರ್ಗಸೂಚಿಗಳನ್ನು ರೂಪಿಸುವ ಹೊಣೆಯನ್ನೂ ಸಚಿವಾಲಯಕ್ಕೆ ವಹಿಸಲಾಗಿದೆ. ಮಾಧ್ಯಮ ಸುದ್ದಿಗಳಿಗೆ ಪ್ರತಿಕ್ರಿಯಿಸದಿರುವುದೇ ಕಾರ್ಯತಂತ್ರವಾಗಿರುವ ಪ್ರಕರಣಗಳಲ್ಲಿ ಮಾರ್ಗಸೂಚಿಗಳನ್ನೂ ಸಚಿವಾಲಯವು ರೂಪಿಸಲಿದೆ.
ಸರಕಾರದ ನಿರ್ಧಾರಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಸಾರಕ್ಕಾಗಿ ಪರಿಣಾಮಕಾರಿ ಸಂವಹನ ಯೋಜನೆ ಮತ್ತು ಕಾರ್ಯತಂತ್ರಗಳ ಕುರಿತು ಕಳೆದ ತಿಂಗಳು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ಮಾರ್ಗಸೂಚಿಗಳನ್ನು ರೂಪಿಸಲು ಸರಕಾರವು ನಿರ್ಧರಿಸಿದೆ.
ಸಮಾಲೋಚನೆಗಳ ಬಳಿಕ ಕೇಂದ್ರ ಸಂಪುಟ ಕಾರ್ಯದರ್ಶಿಗಳು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೆ ಕುರಿತಂತೆ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ವಿವರಿಸಿ ಎಲ್ಲ ಕಾರ್ಯದರ್ಶಿಗಳಿಗೆ ಸುತ್ತೋಲೆಯನ್ನು ಕಳುಹಿಸಿದ್ದಾರೆ.
ಸರಕಾರವು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರಗಳ ಕುರಿತು ಮಾಧ್ಯಮ ಚರ್ಚೆಗಳನ್ನು ನಿರ್ಬಂಧಿಸುವಂತೆ ಮತ್ತು ಇನ್ನೂ ಪ್ರಸ್ತಾವದ ಹಂತದಲ್ಲಿರುವ ಯೋಜನೆಗಳ ವಿವರಗಳನ್ನು ಹಂಚಿಕೊಳ್ಳುವುದರಿಂದ ದೂರವುಳಿಯುವಂತೆ ಈ ಸುತ್ತೋಲೆಯಲ್ಲಿ ಎಲ್ಲ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.