ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸಿದೆ ಎಂಬ ಕಾರಣದಿಂದ ಶಾಸನವನ್ನು ರದ್ದುಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದೆ ಎಂಬ ಏಕೈಕ ಕಾರಣಕ್ಕಾಗಿ ಶಾಸನದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಮದರಸ ಶಿಕ್ಷಣ ಮಂಡಳಿ ಕಾಯ್ದೆ,2004ಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎತ್ತಿ ಹಿಡಿದಿದೆ.
ಕಾಯ್ದೆಯು ಸಂವಿಧಾನದ ಮೂಲರಚನೆಯ ಜಾತ್ಯೀತತತೆ ತತ್ವವನ್ನು ಉಲ್ಲಂಘಿಸಿದೆ ಎಂಬ ಕಾರಣದಿಂದ ಅದನ್ನು ರದ್ದುಗೊಳಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ಅಸಮ್ಮತಿಯನ್ನು ವ್ಯಕ್ತಪಡಿಸಿತು.
ಕಾಯ್ದೆಯು ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸಿದೆ ಎಂಬ ಸಾರಾಸಗಟು ಹೇಳಿಕೆಯ ಬದಲು ಕಾಯ್ದೆಯನ್ನು ರದ್ದುಗೊಳಿಸಲು ಸಂವಿಧಾನದ ಭಾಗ 3ರ ನಿರ್ದಿಷ್ಟ ಉಲ್ಲಂಘನೆ ಅಥವಾ ಶಾಸಕಾಂಗ ಸಾಮರ್ಥ್ಯದ ಕೊರತೆಯನ್ನು ಸಾಬೀತುಗೊಳಿಸಬೇಕು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು,ಸಂವಿಧಾನದ ಮೂಲ ರಚನೆ ಸಿದ್ಧಾಂತದ ಆಧಾರದಲ್ಲಿ ಸಾಂವಿಧಾನಿಕ ತಿದ್ದುಪಡಿಗಳನ್ನು ಪರಿಶೀಲಿಸಬಹುದೇ ಹೊರತು ಸಾಮಾನ್ಯ ಶಾಸನಗಳನ್ನಲ್ಲ ಎಂದು ಸ್ಪಷ್ಟಪಡಿಸಿತು.
ಕಾನೂನು ಶಾಸಕಾಂಗದ ಸಾಮರ್ಥ್ಯ ವ್ಯಾಪ್ತಿಯನ್ನು ಮೀರಿದ್ದರೆ ಅಥವಾ ಸಂವಿಧಾನದ ಭಾಗ 3 ಅಥವಾ ಇತರ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಿದ್ದರೆ;ಈ ಎರಡು ಕಾರಣಗಳಿಂದ ಮಾತ್ರ ಅದನ್ನು ಶಾಸನಾಧಿಕಾರವನ್ನು ಮೀರಿದೆ ಎಂದು ಘೋಷಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ವಿವಿಧ ಪೂರ್ವನಿದರ್ಶನಗಳನ್ನು (ಉದಾ;ಆಂಧ್ರಪ್ರದೇಶ ಸರಕಾರ ವಿರುದ್ಧ ಮೆಕ್‌ಡೊವೆಲ್ ಆ್ಯಂಡ್ ಕಂಪನಿ) ಪ್ರಸ್ತಾವಿಸಿ ತೀರ್ಪಿನಲ್ಲಿ ಬರೆದಿದ್ದಾರೆ.
ಪೂರ್ವ ನಿದರ್ಶನಗಳ ಚರ್ಚೆ ಬಳಿಕ ಸಂವಿಧಾನದ ಭಾಗ 3 ಅಥವಾ ಇತರ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಿದರೆ ಅಥವಾ ಶಾಸಕಾಂಗ ಸಾಮರ್ಥ್ಯದ ವ್ಯಾಪ್ತಿಯನ್ನು ಮೀರಿದರೆ ಮಾತ್ರ ಕಾನೂನನ್ನು ರದ್ದುಗೊಳಿಸಬಹುದು ಎಂದು ತೀರ್ಮಾನಿಸಬಹುದು. ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಶಾಸನದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಜಾಪ್ರಭುತ್ವ,ಒಕ್ಕೂಟವಾದ ಮತ್ತು ಜಾತ್ಯತೀತವಾದದಂತಹ ಪರಿಕಲ್ಪನೆಗಳನ್ನು ವ್ಯಾಖ್ಯಾನಿಸಲಾಗಿಲ್ಲ. ಇಂತಹ ಪರಿಕಲ್ಪನೆಗಳ ಉಲ್ಲಂಘನೆಗಾಗಿ ಶಾಸನವನ್ನು ರದ್ದುಗೊಳಿಸಲು ನ್ಯಾಯಾಲಯಗಳಿಗೆ ಅಧಿಕಾರ ನೀಡಿದರೆ ಅದು ನಮ್ಮ ಸಾಂವಿಧಾನಿಕ ನ್ಯಾಯನಿರ್ಣಯದಲ್ಲಿ ಅನಿಶ್ಚಿತತೆಯನ್ನು ಮೂಡಿಸುತ್ತದೆ. ಇತ್ತೀಚಿಗೆ ಈ ನ್ಯಾಯಾಲಯವು,ಮೂಲರಚನೆಯ ಉಲ್ಲಂಘನೆಗಾಗಿ ಶಾಸನದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವುದು ತಾಂತ್ರಿಕ ಅಂಶವಾಗಿದೆ ಎಂದು ಅಂಗೀಕರಿಸಿದೆ,ಏಕೆಂದರೆ ಉಲ್ಲಂಘನೆಯು ಸಂವಿಧಾನದ ಸ್ಪಷ್ಟ ನಿಯಮಗಳೊಂದಿಗೆ ಗುರುತಿಸಿಕೊಂಡಿರಬೇಕು. ಹೀಗಾಗಿ ಜಾತ್ಯತೀತತೆ ತತ್ವದ ಉಲ್ಲಂಘನೆಗಾಗಿ ಶಾಸನದ ಸಿಂಧುತ್ವವನ್ನು ಪ್ರಶ್ನಿಸಿದಾಗ ಶಾಸನವು ಜಾತ್ಯತೀತತೆಗೆ ಸಂಬಂಧಿಸಿದ ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿದೆ ಎನ್ನುವುದನ್ನು ಸಾಬೀತುಗೊಳಿಸುವುದು ಅಗತ್ಯವಾಗುತ್ತದೆ’ ಎಂದು ನ್ಯಾ.ಚಂದ್ರಚೂಡ್ ತೀರ್ಪಿನಲ್ಲಿ ಹೇಳಿದ್ದಾರೆ.