ಮಣಿಪುರದಲ್ಲಿ ಈಗ ನಾಗಾ ಮತ್ತು ಮೈತೈ ಗುಂಪುಗಳ ನಡುವೆ ಸಂಷರ್ಘ
ಇಂಫಾಲ: ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಾಗಾ ಗುಂಪುಗಳು ಮತ್ತು ಮೈತೈ ಮೂಲಭೂತವಾದಿ ಗುಂಪು ಅರಂಬಾಯಿ ಟೆಂಗೋಲ್ (ಎಟಿ) ನಡುವೆ ಭುಗಿಲೆದ್ದಿರುವ ಘರ್ಷಣೆಯ ಹೊಸ ಸವಾಲನ್ನು ಎದುರಿಸಲು ಭದ್ರತಾ ಪಡೆಗಳು ಸಜ್ಜಾಗುತ್ತಿದ್ದು,ರಾಜ್ಯದಲ್ಲಿ ಕಳೆದ 18 ತಿಂಗಳುಗಳಿಂದ ಉಂಟಾಗಿರುವ ಬಿಕ್ಕಟ್ಟು ಹೊಸ ಹಂತವನ್ನು ಪ್ರವೇಶಿಸಿದಂತಿದೆ ಎಂದು hindustantimes.com ವರದಿ ಮಾಡಿದೆ.
ಕಳೆದ 18 ತಿಂಗಳುಗಳಿಂದ ಎಟಿ ತಮ್ಮ ವಿರುದ್ಧ ದಾಳಿಗಳನ್ನು ನಡೆಸುತ್ತಿದೆ ಎಂದು ಕುಕಿ ಗುಂಪುಗಳು ಆರೋಪಿಸಿದ್ದರೆ, ಇದೇ ಮೊದಲ ಬಾರಿಗೆ ನಾಗಾ ಗುಂಪುಗಳು ಎಟಿ ವಿರುದ್ಧ ಕಣಕ್ಕಿಳಿದಿವೆ. ಕಳೆದ 18 ತಿಂಗಳುಗಳಲ್ಲಿ ಮೈತೈಗಳು ಮತ್ತು ಕುಕಿಗಳು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದರೆ,ನಾಗಾಗಳು ಯಾವುದೇ ಗುಂಪಿನ ವಿರುದ್ಧ ಹೋರಾಡಿರಲಿಲ್ಲ. ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವ ಕುಕಿ ಮತ್ತು ಮೈತೈ ನಿವಾಸಿಗಳನ್ನು ಮೀಸಲು ವಲಯಗಳು ಪ್ರತ್ಯೇಕಿಸಿದ್ದರೂ ರಾಜ್ಯದ ನಾಗಾ ನಿವಾಸಿಗಳು ಉಭಯ ಸಮುದಾಯಗಳೊಂದಿಗೆ ವಾಸಿಸುತ್ತಿದ್ದಾರೆ.
ಇದು ಬದಲಾಗಬಹುದು ಎಂದು ಭದ್ರತಾ ಅಧಿಕಾರಿಗಳು ಕಳವಳಗೊಂಡಿದ್ದಾರೆ.
ಸೇನಾಪತಿ ಜಿಲ್ಲೆಯಲ್ಲಿ ಮೂರು ಪ್ರಮುಖ ನಾಗಾ ಗುಂಪುಗಳು ಕರೆ ನೀಡಿದ್ದ 48 ಗಂಟೆಗಳ ಬಂದ್ ರವಿವಾರ ಸಂಜೆ ಅಂತ್ಯಗೊಂಡಿದ್ದು, ಇಂಫಾಲದತ್ತ ಸಾಗುವ ಎಲ್ಲ ವಾಣಿಜ್ಯ ವಾಹನಗಳಿಗೆ ಅನಿರ್ದಿಷ್ಟಾವಧಿ ತಡೆಯನ್ನು ಒಡ್ಡುವುದಾಗಿ ಈ ಗುಂಪುಗಳು ಪ್ರಕಟಿಸಿವೆ. ನಾಗಾ ಪೀಪಲ್ಸ್ ಆರ್ಗನೈಸೇಷನ್(ಎನ್‌ಪಿಒ), ಸೇನಾಪತಿ ಜಿಲ್ಲಾ ವಿದ್ಯಾರ್ಥಿಗಳ ಸಂಘ(ಎಸ್‌ಡಿಎಸ್‌ಎ) ಮತ್ತು ಸೇನಾಪತಿ ಜಿಲ್ಲಾ ಮಹಿಳಾ ಸಂಘ(ಎಸ್‌ಡಿಡಬ್ಲ್ಯುಎ) ಅ.1ರಂದು ಎಟಿಯಿಂದ ಇಬ್ಬರು ನಾಗಾ ವ್ಯಾಪಾರಿಗಳ ಅಪಹರಣ ಮತ್ತು ಹಲ್ಲೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದಿವೆ.
ಎಟಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಎರಡು ಬೇಡಿಕೆಗಳನ್ನು ನಾಗಾ ಗುಂಪುಗಳು ಮುಂದಿಟ್ಟಿವೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ವಾಹನಗಳಿಗೆ ತಡೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಅವು ಪಟ್ಟು ಹಿಡಿದಿವೆ. ಪ್ರಭಾವಿ ಮೈಟಿ ಗುಂಪಾಗಿರುವ ಎಟಿ ಕುಕಿಗಳು ಮತ್ತು ಮೈತೈಗಳ ನಡುವೆ ಸಂಘರ್ಷಗಳಲ್ಲಿ ಮುಂಚೂಣಿಯಲ್ಲಿದೆ.
ಮೂರೂ ನಾಗಾ ಗುಂಪುಗಳು ಇಬ್ಬರು ನಾಗಾ ವ್ಯಾಪಾರಿಗಳ ಅಪಹರಣ ಮತ್ತು ಹಲ್ಲೆ ಘಟನೆಯನ್ನು ವಿವರಿಸಿ ಮಣಿಪುರ ಮುಖ್ಯಮಂತ್ರಿ ಎನ್.ಬೀರೇಂದ್ರ ಸಿಂಗ್ ಅವರಿಗೆ ಅಹವಾಲನ್ನು ಸಲ್ಲಿಸಿವೆ,ಆದರೆ ಅದರಲ್ಲಿ ಎಟಿಯನ್ನು ಹೆಸರಿಸಲಾಗಿಲ್ಲ. ಘಟನೆಯಲ್ಲಿ ಭಾಗಿಯಾಗಿರುವ ಸಮುದಾಯವನ್ನು ಪ್ರತಿನಿಧಿಸುತ್ತಿರುವ ನಾಗರಿಕ ಸಮಾಜ ಸಂಘಟನೆಗಳು ಮಧ್ಯಸ್ಥಿಕೆ ವಹಿಸಲು ಅಥವಾ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ಅಹವಾಲಿನಲ್ಲಿ ಹೇಳಲಾಗಿದೆ.
ಈ ನಡುವೆ ಮಣಿಪುರ ಪೋಲಿಸರು ರವಿವಾರ ಮಧ್ಯರಾತ್ರಿ ಹೊರಡಿಸಿರುವ ಹೇಳಿಕೆಯಲ್ಲಿ ಸೇನಾಪತಿಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಖುಲ್ಲೆಮ್ ಸಂಜೀಪ್ ಅಲಿಯಾಸ್ ಭೀಮ್(30) ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಶಮನಿಸಲು,ವಾಹನ ದಿಗ್ಬಂಧನವನ್ನು ತೆರವುಗೊಳಿಸಲು ಮತ್ತು ಹಲ್ಲೆ ಘಟನೆ ಕೋಮು ಅಥವಾ ಜನಾಂಗೀಯ ಬಣ್ಣ ತಳೆಯದಂತೆ ನೋಡಿಕೊಳ್ಳಲು ನಾಗಾ ನಾಯಕರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಮಣಿಪುರ ಸರಕಾರದ ಅಧಿಕಾರಿಗಳು ತಿಳಿಸಿದರು.