ನ್ಯಾವಿಕ್‌ನೊಂದಿಗೆ ದೇಶವು ಪಥದರ್ಶಕ ವ್ಯವಸ್ಥೆಯಲ್ಲಿ ಸ್ವಾವಲಂಬಿಯಾಗುತ್ತಿದೆ : ಇನ್-ಸ್ಪೇಸ್ ಮುಖ್ಯಸ್ಥ

Update: 2024-12-03 15:34 GMT

ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ | PC : X \ @GoenkaPk 

ಹೈದರಾಬಾದ್ : ಜಿಪಿಎಸ್‌ ಹೋಲುವ ದೇಶದ ಉಪಗ್ರಹ ಪಥದರ್ಶಕ ವ್ಯವಸ್ಥೆ ನ್ಯಾವಿಕ್‌(NavIC)ನಿಂದಾಗಿ ಭಾರತವು ವ್ಯೆಹಾತ್ಮಕ ಅಪ್ಲಿಕೇಷನ್‌ಗಳಿಗೆ ಅಗತ್ಯವಿರುವ ದತ್ತಾಂಶಗಳಲ್ಲಿ ಬಹುತೇಕ ಸ್ವಾವಲಂಬಿಯಾಗಿದೆ ಎಂದು ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ ಅವರು ಮಂಗಳವಾರ ಇಲ್ಲಿ ಹೇಳಿದರು.

ನಾಗರಿಕ ಬಳಕೆಗಳಿಗೂ ಭಾರತವನ್ನು ದುರ್ಬಲಗೊಳಿಸಬಹುದಾದ ವಿದೇಶಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು.

ಇಲ್ಲಿ ಜಿಯೋಸ್ಮಾರ್ಟ್ ಇಂಡಿಯಾ 2024 ಸಮ್ಮೇಳನದಲ್ಲಿ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಗೊಯೆಂಕಾ,‘ರಕ್ಷಣೆ,ನಾಗರಿಕ ಬಳಕೆ ಅಥವಾ ಉದ್ಯಮವಾಗಿರಲಿ,ನಮ್ಮೆಲ್ಲ ವ್ಯೆಹಾತ್ಮಕ ಅಗತ್ಯಗಳಿಗಾಗಿ ನಾವು ಇತರರ ಮೇಲೆ ಅವಲಂಬಿತವಾಗಿಲ್ಲ ಎನ್ನುವುದು ನಾವಿಕ್‌ನೊಂದಿಗೆ ನಮ್ಮ ಗುರಿಯಾಗಿದೆ. ಯಾರಾದರೂ ಪೂರೈಕೆಯನ್ನು ನಿಲ್ಲಿಸಿದರೆ ನಮ್ಮ ಸ್ವಂತ ವ್ಯವಸ್ಥೆಗಳಿಗೆ ಬದಲಾಗುವ ಸಾಮರ್ಥ್ಯವನ್ನು ನಾವು ಹೊಂದಿರಬೇಕು ’ ಎಂದು ಹೇಳಿದರು.

ಆದರೂ ನ್ಯಾವಿಕ್‌ ಜಿಪಿಎಸ್‌ನಂತಹ ಇತರ ಪಥದರ್ಶಕ ವ್ಯವಸ್ಥೆಗಳೊಂದಿಗೆ ಸಹ ಅಸ್ತಿತ್ವದಲ್ಲಿರುತ್ತದೆ ಎಂದ ಅವರು,ಭಾರತವು ನ್ಯಾವಿಕ್‌ ಅನ್ನು ಸ್ವತಂತ್ರವಾಗಿ ಬಳಸಿಕೊಂಡು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಶಕ್ತವಾಗಬೇಕು ಎಂದು ಒತ್ತಿ ಹೇಳಿದರು.

ನ್ಯಾವಿಕ್‌(ನ್ಯಾವಿಗೇಷನ್ ವಿತ್ ಇಂಡಿಯನ್ ಕನ್ಸ್ಟಲೇಷನ್) ಇಸ್ರೋ ಅಭಿವೃದ್ಧಿಗೊಳಿಸಿರುವ ಭಾರತದ ಸ್ವಂತ ಉಪಗ್ರಹ ಪಥದರ್ಶಕ ವ್ಯವಸ್ಥೆಯಾಗಿದೆ. ಅದು ಜಾಗತಿಕ ಸ್ಥಾನ ನಿರ್ಣಯ ವ್ಯವಸ್ಥೆ ಜಿಪಿಎಸ್‌ನಂತೆ ನಿಖರವಾದ ಸ್ಥಳ ಮತ್ತು ಸಮಯದ ಮಾಹಿತಿಯನ್ನು ಒದಗಿಸಲು ನೆರವಾಗುತ್ತದೆ. ಇದನ್ನು ಭಾರತ ಮತ್ತು ಅದರ ಸುತ್ತಲಿನ 1,500 ಕಿ.ಮೀ.ವರೆಗಿನ ಪ್ರದೇಶದ ವ್ಯಾಪ್ತಿಯನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ.

ಸಂವಹನ ಉಪಗ್ರಹಗಳಿಗೆ ಸಂಬಂಧಿಸಿದಂತೆ ಗೊಯೆಂಕಾ,‘ಭಾರತದ ಸ್ವಂತ ಉಪಗ್ರಹಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅದು ಈಗಲೂ ವಿದೇಶಿ ಉಪಗ್ರಹಗಳನ್ನು ಭಾಗಶಃ ಅವಲಂಬಿಸಿದೆ. ಇಸ್ರೋದ ವಾಣಿಜ್ಯ ವಿಭಾಗ ನ್ಯೂಸ್ಪೇಸ್ ಇಂಡಿಯ ಲಿ.ನಿಂದಾಗಿ ಇಂದು ನಾವು ವಿದೇಶಗಳಿಗಿಂತ ಕೊಂಚ ಹೆಚ್ಚೇ ಉಪಗ್ರಹಗಳನ್ನು ಹೊಂದಿರಬಹುದು. ಆದರೆ ನಮಗೆ ಭಾರತೀಯ ಉಪಗ್ರಹಗಳ ಸ್ಥಿರವಾದ ಪೂರೈಕೆಯ ಅಗತ್ಯವಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News