ಉತ್ತರ ಪ್ರದೇಶ | ಕಾಂಗ್ರೆಸ್ ಸಂಸದರೊಂದಿಗೆ ಸಂಭಲ್ ಗೆ ನಾಳೆ ರಾಹುಲ್ ಭೇಟಿ

Update: 2024-12-03 17:03 GMT

ರಾಹುಲ್‌ಗಾಂಧಿ | PC : PTI 

ಹೊಸದಿಲ್ಲಿ : ನವೆಂಬರ್ 24ರಂದು ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಸಂಭಲ್ ಪಟ್ಟಣಕ್ಕೆ ಲೋಕಸಭೆಯ ಪ್ರತಿಪಪಕ್ಷ ನಾಯಕ ರಾಹುಲ್‌ಗಾಂಧಿ ಬುಧವಾರ ಭೇಟಿ ನೀಡಲಿದ್ದು ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಇತರ ಐವರು ಉತ್ತರ ಪ್ರದೇಶ ಸಂಸದರು ಕೂಡಾ ಅವರ ಜೊತೆ ತೆರಳಲಿದ್ದಾರೆ. ವಯನಾಡ್‌ನ ಲೋಕಸಭಾ ಸದಸ್ಯೆ ಪ್ರಿಯಾಂಕಾಗಾಂಧಿ ವಾದ್ರಾ ಅವರು ಕೂಡಾ ರಾಹುಲ್ ಗಾಂಧಿ ಅವರೊಂದಿಗೆ ಸಂಬಲ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಸಂಬಲ್‌ನ ಮೊಗಲರ ಕಾಲದ ಮಸೀದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಸಮೀಕ್ಷೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ನಡೆಸಿದ ಗೋಲಿಬಾರ್‌ಗೆ ಏಳು ಮಂದಿ ಬಲಿಯಾಗಿದ್ದರು.

‘‘ಸಂಭಲ್‌ಗೆ ತೆರಳದಂತೆ ಪೊಲೀಸರು ನಮ್ಮನ್ನು ತಡೆದು ನಿಲ್ಲಿಸುತ್ತಿದ್ದಾರೆ. ಸಂತ್ರಸ್ತರ ಯೋಗಕ್ಷೇಮವನ್ನು ನಾವು ವಿಚಾರಿಸಬಾರದೆಂದರೆ, ಅದು ನಾಚಿಕೆಗೇಡಿನ ವಿಷಯವಲ್ಲವೇ? ಸಂಬಲ್ ಘಟನೆ ಬಗ್ಗೆ ನಾವು ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ ’’ಎಂದು ಕಾಂಗ್ರೆಸ್ ನಾಯಕ ಸಚಿನ್ ಚೌಧುರಿ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘‘ ನಾವು ಮಧ್ಯಾಹ್ನ 1:00 ಗಂಟೆಗೆ ಸಂಭಲ್‌ಗೆ ನಿರ್ಗಮಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ತಲುಪಲಿದ್ದೇವೆ. ಇಂದು ಬೆಳಗ್ಗಿನಿಂದಲೂ ಪೊಲೀಸರು ನನ್ನ ಮನೆಯ ಸುತ್ತಲೂ ಜಮಾಯಿಸಿದ್ದಾರೆ’’ ಎಂದು ಚೌಧುರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News