ಪ್ರತಿಭಟನಾನಿರತ ರೈತರೊಂದಿಗೆ ಏಕೆ ಮಾತುಕತೆ ನಡೆಸಲಿಲ್ಲ?: ಕೃಷಿ ಸಚಿವರಿಗೆ ಉಪರಾಷ್ಟ್ರಪತಿ ಪ್ರಶ್ನೆ
ಮುಂಬೈ: ದಿಲ್ಲಿ-ನೋಯ್ಡಾ ಗಡಿಯಲ್ಲಿ ರೈತರು ಮತ್ತೆ ಪ್ರತಿಭಟನೆ ನಡೆಸುತ್ತಿರುವ ನಡುವೆ, ಮಂಗಳವಾರ ಪ್ರತಿಭಟನಾನಿರತ ರೈತರೊಂದಿಗೆ ಏಕೆ ಮಾತುಕತೆ ನಡೆಸಲಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಶ್ನಿಸಿದ ಧನ್ಕರ್, ಈ ಹಿಂದೆ ನೀಡಿದ್ದ ಭರವಸೆ ಏನಾಯಿತು ಎಂದೂ ಕೇಳಿದ್ದಾರೆ.
ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ದೋಷಪೂರಿತ ನೀತಿ ನಿರೂಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದ್ದು, ಆದ್ಯತೆಯ ಮೇಲೆ ರೈತರ ಕಳವಳಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನ್ಕರ್, “ಕೃಷಿ ಸಚಿವರೇ, ನಿಮಗಿಂತ ಮೊದಲು ಅಲ್ಲಿದ್ದ ಕೃಷಿ ಸಚಿವರು ಲಿಖಿತವಾಗಿ ಯಾವುದೇ ಭರವಸೆ ನೀಡಿದ್ದಾರೆಯೇ? ಒಂದು ವೇಳೆ ಭರವಸೆ ನೀಡಿದರೆ, ಅದು ಏನಾಯಿತು?” ಎಂದು ಪ್ರಶ್ನಿಸಿದ್ದಾರೆ.
ಇದು ಗಂಭೀರ ವಿಷಯ ಎಂದು ಕರೆದ ಅವರು, ರೈತರ ತಾಳ್ಮೆಯನ್ನು ಪರೀಕ್ಷಿಸದಂತೆಯೂ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಶಕ್ತಿಯು ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ದೇಶ ಅದರ ಪರಿಣಾಮ ಎದುರಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.
"ನಾವು ರೈತ ಮತ್ತು ಸರ್ಕಾರದ ನಡುವೆ ಗಡಿಯನ್ನು ರಚಿಸಬಹುದೇ? ರೈತರೊಂದಿಗೆ ಏಕೆ ಸಂವಾದ ನಡೆಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಉಪಕ್ರಮವು ಇಲ್ಲಿಯವರೆಗೆ ಏಕೆ ಆಗಲಿಲ್ಲ ಎಂಬುದು ನನ್ನ ಕಳವಳವಾಗಿದೆ" ಎಂದು ಉಪರಾಷ್ಟ್ರಪತಿ ಹೇಳಿದರು.
“ನೀವು (ಶಿವರಾಜ್ ಸಿಂಗ್ ಚೌಹಾಣ್) ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. ನಾನು ಸರ್ದಾರ್ ಪಟೇಲ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ರಾಷ್ಟ್ರವನ್ನು ಏಕೀಕರಿಸುವ ಅವರ ಜವಾಬ್ದಾರಿಯನ್ನು ಅವರು ಅತ್ಯುತ್ತಮವಾಗಿ ಮಾಡಿದರು. ಈ ಸವಾಲು ಇಂದು ನಿಮ್ಮ ಮುಂದಿದೆ. ಇದನ್ನು ಭಾರತದ ಏಕತೆಗಿಂತ ಕಡಿಮೆ ಎಂದು ಪರಿಗಣಿಸಬಾರದು” ಎಂದು ಧನ್ಕರ್ ಹೇಳಿದರು.
“ಜಗತ್ತಿನಲ್ಲಿ ನಮ್ಮ ಖ್ಯಾತಿ ಎಂದೂ ಇಂದಿನಂತೆ ಹೆಚ್ಚಾಗಿರಲಿಲ್ಲ. ಹೀಗಿರುವಾಗ ನನ್ನ ರೈತ ಏಕೆ ಸಂಕಷ್ಟಕ್ಕೆ ಸಿಲುಕಿದ್ದಾನೆ? ಅವನು ಯಾಕೆ ಬಳಲುತ್ತಿದ್ದಾನೆ? ರೈತ ಏಕೆ ಒತ್ತಡಕ್ಕೊಳಗಾಗಿದ್ದಾನೆ? ಇದು ಗಂಭೀರ ಸಮಸ್ಯೆಯಾಗಿದೆ, ಇದನ್ನು ಲಘುವಾಗಿ ಪರಿಗಣಿಸುವುದು ಎಂದರೆ ನಾವು ಪ್ರಾಯೋಗಿಕವಾಗಿಲ್ಲ ಹಾಗೂ ನಮ್ಮ ನೀತಿ ನಿರೂಪಣೆ ಸರಿಯಾದ ಹಾದಿಯಲ್ಲಿಲ್ಲ ಎಂದರ್ಥ. ದೇಶದ ಯಾವ ಶಕ್ತಿಯೂ ರೈತನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರೈತನ ತಾಳ್ಮೆಯನ್ನು ಪ್ರಯತ್ನಿಸಿದರೆ ರಾಷ್ಟ್ರವು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ” ಎಂದು ಧನ್ಕರ್ ಟೀಕಿಸಿದ್ದಾರೆ.
ʼದಿಲ್ಲಿ ಚಲೋʼ ಹೊರಟಿರುವ ಉತ್ತರ ಪ್ರದೇಶದ ಸಾವಿರಾರು ರೈತರು ನೋಯ್ಡಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಉಪರಾಷ್ಟ್ರಪತಿಯವರ ಈ ಪ್ರತಿಕ್ರಿಯೆ ಹೊರಬಿದ್ದಿವೆ. ಭೂ ಪರಿಹಾರ ಮತ್ತು ಇತರ ಭರವಸೆಗಳ ಮೇಲಿನ ತಮ್ಮ ಬೇಡಿಕೆಗಳನ್ನು ಏಳು ದಿನಗಳಲ್ಲಿ ಈಡೇರಿಸದಿದ್ದರೆ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಫೆಬ್ರವರಿಯಿಂದ ಹರ್ಯಾಣ-ಪಂಜಾಬ್ ಗಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಸಕ್ರಮಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಇನ್ನೊಂದು ಗುಂಪು ಕೂಡ ತಮ್ಮ ಆಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಿದ್ದು, ಡಿಸೆಂಬರ್ 6 ರಿಂದ ಕಾಲ್ನಡಿಗೆಯಲ್ಲಿ ದಿಲ್ಲಿಯತ್ತ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ.