ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ನೌಕಾಪಡೆ ಹೆಲಿಕಾಪ್ಟರ್
Update: 2024-12-04 17:57 GMT
ಬಾರಿಪದ (ಒಡಿಶಾ) : ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮಯೂರ್‌ಭಂಜ್ ಜಿಲ್ಲೆಯ ಭತ್ತದ ಗದ್ದೆಯಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ಗೋವಿಂದಪುರ ಪೊಲೀಸ್ ಠಾಣಾ ಪ್ರದೇಶದ ಅರ್ಮದಾ ಗ್ರಾಮದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವುದರಿಂದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಅಚ್ಚರಿ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಅನ್ನು ಭೂಸ್ಪರ್ಶ ಮಾಡಿಸಿದ ಬಳಿಕ ಪೈಲಟ್ ಕೆಳಗಿಳಿದು ಪರಿಶೀಲನೆ ನಡೆಸಿದರು. ಸುಮಾರು 30 ನಿಮಿಷಗಳ ನಂತರ ಹೆಲಿಕಾಪ್ಟರ್ ಮತ್ತೆ ಹಾರಾಟ ಆರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.