ʼಅತ್ಯಾಚಾರ, ಕೊಲೆಯಂತ ಗಂಭೀರ ಅಪರಾಧಗಳಲ್ಲಿ ವಿಚಾರಣೆ ಪ್ರಾರಂಭದ ಬಳಿಕ ಜಾಮೀನು ಅರ್ಜಿ ಪರಿಗಣಿಸಬಾರದುʼ: ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಕೊಲೆ, ಅತ್ಯಾಚಾರ, ದರೋಡೆ ಮುಂತಾದ ಗಂಭೀರ ಅಪರಾಧಗಳಲ್ಲಿ ವಿಚಾರಣೆ ಪ್ರಾರಂಭದ ಬಳಿಕ ಆರೋಪಿಗಳ ಜಾಮೀನು ಅರ್ಜಿ ಯನ್ನು ನ್ಯಾಯಾಲಯಗಳು ಮತ್ತು ಹೈಕೋರ್ಟ್ ಗಳು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಅತ್ಯಾಚಾರ, ಕೊಲೆ, ಡಕಾಯಿತಿ ಮುಂತಾದ ಗಂಭೀರ ಅಪರಾಧಗಳಲ್ಲಿ ವಿಚಾರಣೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ ಬಳಿಕ ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸಬಾರದು ಎಂದು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹದೇವನ್ ಅವರನ್ನೊಳಗೊಂಡ ಪೀಠವು ಹೇಳಿದೆ.
ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶವನ್ನು ಗಮನಿಸಿದೆ. ಎಫ್ ಐಆರ್ ಮತ್ತು ಸಂತ್ರಸ್ತೆಯ ಸೆಕ್ಷನ್ 164 ಸಿರ್ ಪಿಸಿ ಹೇಳಿಕೆಯಲ್ಲಿನ ಕೆಲವು ವ್ಯತ್ಯಾಸಗಳನ್ನು ಉಲ್ಲೇಖಿಸಿ ಹೈಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿತ್ತು.