500 ರೂ.ಗೆ ಅಡುಗೆ ಅನಿಲ, 300 ಯೂನಿಟ್ ಉಚಿತ ವಿದ್ಯುತ್ | ದಿಲ್ಲಿ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ
ಹೊಸದಿಲ್ಲಿ : ದಿಲ್ಲಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 500 ರೂ. ಬೆಲೆಗೆ ಅಡುಗೆ ಅನಿಲ, ಒಂದು ಉಚಿತ ಪಡಿತರ ಚೀಲ ಮತ್ತು 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಗುರುವಾರ ಆಶ್ವಾಸನೆ ನೀಡಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಗ್ಯಾರಂಟಿಗಳನ್ನು ಘೋಷಿಸಿದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುವಂತೆ ದಿಲ್ಲಿ ಮತದಾರರನ್ನು ವಿನಂತಿಸಿದರು. ಮೂರು ಅವಧಿಯಲ್ಲಿ ಅಧಿಕಾರದಲ್ಲಿದ್ದರೂ ರಾಷ್ಟ್ರ ರಾಜಧಾನಿಯ ಪರಿಸ್ಥಿತಿಯನ್ನು ಸುಧಾರಿಸಲು ಮೋದಿ ಮತ್ತು ಕೇಜ್ರಿವಾಲ್ ಸರಕಾರಗಳು ಏನೂ ಮಾಡಿಲ್ಲ ಎಂದು ರೆಡ್ಡಿ ಆರೋಪಿಸಿದರು.
‘‘ಮೋದಿ ಮತ್ತು ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವರ ಹೆಸರುಗಳು ಮಾತ್ರ ಬೇರೆ, ಆದರೆ ಕೆಲಸ ಒಂದೇ- ಸುಳ್ಳು ಹೇಳುವುದು. ಮೋದಿ ಮೂರು ಬಾರಿ ಪ್ರಧಾನಿಯಾಗಿದ್ದಾರೆ ಮತ್ತು ಕೇಜ್ರಿವಾಲ್ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಅವರು ದಿಲ್ಲಿಗೆ ಏನು ಮಾಡಿದ್ದಾರೆ? ಇಂದು ದಿಲ್ಲಿ ವಾಸಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿ ಎಂದು ನಾನು ದಿಲ್ಲಿ ಜನತೆಗೆ ಮನವಿ ಮಾಡುತ್ತೇನೆ. ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ’’ ಎಂದು ಅವರು ವಾಗ್ದಾಳಿ ನಡೆಸಿದರು.
ದಿಲ್ಲಿಯಲ್ಲಿ ನಿರಂತರ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ತೀವ್ರ ಹಿನ್ನಡೆ ಕಂಡಿದೆ. ಈ ಚುನಾವಣೆಗಳಲ್ಲಿ ಅದಕ್ಕೆ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2020ರ ಚುನಾವಣೆಯಲ್ಲಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಆಪ್ 62 ಸ್ಥಾನಗಳನ್ನು ವಶಪಡಿಸಿಕೊಂಡಿದೆ ಮತ್ತು ಉಳಿದ ಎಂಟು ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ.