ಕೇಂದ್ರೀಯ ವಿವಿಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಸುರಕ್ಷಿತರೇ? : ಯಾವುದೇ ಮಾಹಿತಿಯಿಲ್ಲ ಎಂದ ಕೇಂದ್ರ
ಹೊಸದಿಲ್ಲಿ : ಕೇಂದ್ರೀಯ ವಿವಿಗಳು, ಐಐಟಿಗಳು, ಏಮ್ಸ್‌ಗಳು ಮತ್ತು ಇತರ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯದ ಪ್ರಕರಣಗಳ ಸಂಖ್ಯೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇಂದ್ರ ಸರಕಾರವು ಕೇಂದ್ರೀಯವಾಗಿ ನಿರ್ವಹಿಸುವುದಿಲ್ಲ. ಸಂಸತ್ತಿನಲ್ಲಿ ಜೆಡಿಯು ಸಂಸದ ಡಾ.ಅಲೋಕ ಕುಮಾರ ಸುಮನ್ ಅವರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಕೇಂದ್ರ ಸರಕಾರವು ಇದನ್ನು ಒಪ್ಪಿಕೊಂಡಿದೆ.
ಗಮನಾರ್ಹವಾಗಿ ಕಳೆದೊಂದು ದಶಕದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ವಿರುದ್ಧ ಅಪರಾಧಗಳ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2013 ಮತ್ತು 2022ರ ನಡುವೆ ಎಸ್‌ಸಿ/ಎಸ್‌ಟಿಗಳ ವಿರುದ್ಧ ದೌರ್ಜನ್ಯಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ 5.24 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
2013ಕ್ಕೆ ಹೋಲಿಸಿದರೆ 2022ರಲ್ಲಿ ಶೇ.46ರಷ್ಟು ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆದರೆ ಸರಕಾರವು ಹೆಚ್ಚುತ್ತಿರುವ ಜಾಗ್ರತಿ,ವ್ಯಾಪಕ ಪ್ರಚಾರ ಮತ್ತು ಪೋಲಿಸ್ ಸಿಬ್ಬಂದಿಗಳ ಸಾಮರ್ಥ್ಯ ಹೆಚ್ಚಳ ಇವು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಹೆಚ್ಚು ಪ್ರಕರಣಗಳು ದಾಖಲಾಗಲು ಕೆಲವು ಕಾರಣಗಳಾಗಿವೆ ಎಂದು ಹೇಳಿಕೊಂಡಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ)ದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ರಾಮದಾಸ ಪ್ರಿನಿ ಶಿವಾನಂದನ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ದೂಷಿಸಿದರು. ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ ಕುರಿತು ಅದರ ನಿಲುವು ಅವರ ಕಲ್ಯಾಣದ ಮೇಲೆ ಗಮನ ಹರಿಸುವ ಬದಲು ಅದರ ‘ಒಡೆದು ಆಳುವ’ ನೀತಿಯನ್ನು ಪ್ರತಿಫಲಿಸುತ್ತಿದೆ ಮತ್ತು ದೌರ್ಜನ್ಯಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಮಾಹಿತಿಯನ್ನೂ ಅದು ಕಾಯ್ದುಕೊಳ್ಳದಿರುವುದನ್ನು ಪ್ರತ್ಯೇಕ ಸಂಗತಿಯನ್ನಾಗಿ ನೋಡಬಾರದು ಎಂದು ಆರೋಪಿಸಿದರು.
ಮೋದಿ ಸರಕಾರದ ಮೊದಲ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಸಂಭವಿಸುತ್ತಿದ್ದ ಘಟನೆಗಳೊಂದಿಗೆ ದಲಿತ ಸಮುದಾಯಗಳ ವಿರುದ್ಧ ದೌರ್ಜನ್ಯಗಳು ಆಗಾಗ್ಗೆ ಪ್ರಮುಖ ಸುದ್ದಿಗಳಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ದಲಿತರ ವಿರುದ್ಧದ ದೌರ್ಜನ್ಯಗಳು ಪ್ರಮುಖ ಸುದ್ದಿಯಾಗುತ್ತಿಲ್ಲ. ಇದು ಇಂತಹ ದೌರ್ಜನ್ಯಗಳು ನಿಜಕ್ಕೂ ಕಡಿಮೆಯಾಗಿವೆಯೇ ಅಥವಾ ಅವುಗಳನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗೋಚರತೆ ಮತ್ತು ಸೂಕ್ತ ಕ್ರಮದ ಕೊರತೆಯು ವ್ಯವಸ್ಥಿತ ತಾರತಮ್ಯದ ಕುರಿತು ಕಳವಳಗಳನ್ನು ಹೆಚ್ಚಿಸುತ್ತದೆ ಎಂದರು.
ಈ ವರ್ಷದ ಕೇಂದ್ರ ಮುಂಗಡಪತ್ರದಲ್ಲಿ ಈ ವ್ಯವಸ್ಥಿತ ತಾರತಮ್ಯವನ್ನು ಎತ್ತಿ ತೋರಿಸಿದ ಶಿವಾನಂದನ್, ಬಜೆಟ್ ಪರಿಶೀಲನೆಯು ವಿಶೇಷವಾಗಿ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳಿಗೆ ನಿಧಿ ಹಂಚಿಕೆಯಲ್ಲಿ ಗಮನಾರ್ಹ ಕಡಿತಗಳನ್ನು ಬೆಳಕಿಗೆ ತಂದಿದೆ. ವಿಶೇಷವಾಗಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗಾಗಿ ಪ್ರಮುಖ ಶಿಕ್ಷಣ ಕಾರ್ಯಕ್ರಮಗಳನ್ನು ಈ ಸಚಿವಾಲಯಗಳು ನಿರ್ವಹಿಸುತ್ತವೆ ಎಂದು ಹೇಳಿದರು.