ರೈತ ನಾಯಕ ರಾಕೇಶ್ ಟಿಕಾಯತ್ ಅಲಿಘಡದಲ್ಲಿ ಪೊಲೀಸ್ ವಶಕ್ಕೆ

Update: 2024-12-04 15:52 GMT

ರಾಕೇಶ್ ಟಿಕಾಯತ್| PTI 

ಹೊಸದಿಲ್ಲಿ : ರೈತ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಗ್ರೇಟರ್ ನೋಯ್ಡಾಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಅವರನ್ನು ಪೊಲೀಸರು ಅಲಿಗಢದಲ್ಲಿ ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ತನ್ನ ಸಹವರ್ತಿಗಳೊಂದಿಗೆ ಪ್ರಯಾಣಿಸುತ್ತಿದ್ದ ಟಿಕಾಯತ್ ಅವರನ್ನು ಆಲಿಗಢ ಪೊಲೀಸರು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ತಡೆದರು ಹಾಗೂ ಬಸ್‌ನಲ್ಲಿ ಟಪ್ಪಾಲ್ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕಾಯತ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಲಿಗಢ ಪೊಲೀಸ್‌ನ ವಕ್ತಾರರು ದೃಢಪಡಿಸಿದ್ದಾರೆ. ಆದರೆ, ಬಂಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರದೊಂದಿಗೆ ಮಾತನಾಡಿದ ಟಿಕಾಯತ್ ಪೊಲೀಸರನ್ನು ಟೀಕಿಸಿದರು. ಅಲ್ಲದೆ, ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ತಲುಪದಂತೆ ಪೊಲೀಸರು ರೈತರ ಪ್ರಯಾಣಕ್ಕೆ ತಡೆ ಒಡ್ಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

‘‘ನೀವು ಎಷ್ಟು ಕಾಲ ನಮ್ಮನ್ನು ವಶದಲ್ಲಿ ಇರಿಸಬಹುದು ? ನೀವು ನಮ್ಮನ್ನು ಬಂಧಿಯಾಗಿ ಇರಿಸಿದರೆ, ಅನಂತರ ನೀವು ಯಾರೊಂದಿಗೆ ಮಾತನಾಡುತ್ತೀರಿ’’ ಎಂದು ಅವರು ಪ್ರಶ್ನಿಸಿದರು.

ಪೊಲೀಸರು ಇಂತಹ ಕ್ರಮಗಳನ್ನು ಮುಂದುವರಿಸಿದರೆ, ರೈತರ ಹೋರಾಟ ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಭಾರತೀಯ ಕಿಸಾನ್ ಒಕ್ಕೂಟದ ನಾಯಕ ನರೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ಬಿಕೆಯು ಮುಝಪ್ಫರ್‌ನಗರದ ಸಿಸೌಲಿಯ ಕಿಸಾನ್ ಭವನದಲ್ಲಿ ಮಂಗಳವಾರ ತುರ್ತು ಸಭೆ ಆಯೋಜಿಸಲಾಗಿತ್ತು. ಭೂಮಿಗೆ ಪರಿಹಾರ ಹಾಗೂ ಇತರ ವಿಷಯಗಳ ಕುರಿತಂತೆ ಪ್ರತಿಭಟಿಸುತ್ತಿರುವ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ರೈತರನ್ನು ಬೆಂಬಲಿಸುವುದಾಗಿ ಅದು ಹೇಳಿತ್ತು.

ಪ್ರತಿಭಟನೆಗೆ ಬೆಂಬಲಿಸಲು ಗ್ರೇಟರ್ ನೋಯ್ಡಾದ ಝೀರೋ ಪಾಯಿಂಟ್‌ನಲ್ಲಿ ಬುಧವಾರ ಸಭೆ ಸೇರುವಂತೆ ಪಶ್ಚಿಮ ಉತ್ತರಪ್ರದೇಶದ ಸದಸ್ಯರು ಹಾಗೂ ಕಾರ್ಮಿಕರಿಗೆ ಕರೆ ನೀಡಲಾಗಿದೆ ಎಂದು ಬಿಕೆಯ ಯುವ ಘಟಕದ ಅಧ್ಯಕ್ಷ ಅನುಜ್ ಸಿಂಗ್ ಹೇಳಿದ್ದರು.

ಆಡಳಿತ ಹಾಗೂ ಸ್ಥಳೀಯಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲು ಸಾವಿರಾರು ಗ್ರಾಮಸ್ತರು ಗ್ರೇಟರ್ ನೋಯ್ಡಾದ ಝೀರೋ ಪಾಯಿಂಟ್‌ನಲ್ಲಿ ಬುಧವಾರ ಸಭೆ ಸೇರಿದರು. ಹಿಂದಿನ ವರ್ಷ ರಾಜ್ಯ ಸರಕಾರ ವಶಪಡಿಸಿಕೊಂಡ ಭೂಮಿಗೆ ನ್ಯಾಯಯುತ ಪರಿಹಾರ ಹಾಗೂ ಹೆಚ್ಚುವರಿ ಸೌಲಭ್ಯಗಳನ್ನು ನೀಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News