ಒಡಿಶಾ | ಕಳೆದ 22 ತಿಂಗಳಲ್ಲಿ 5,20,237 ನಾಯಿ ಕಡಿತ ಪ್ರಕರಣ!
ಭುವನೇಶ್ವರ: ಬುಧವಾರ ಒಡಿಶಾ ವಿಧಾನಸಭೆಯಲ್ಲಿ ಮಂಡಿಸಲಾದ ಸರಕಾರಿ ದತ್ತಾಂಶಗಳ ಪ್ರಕಾರ, ಜನವರಿ 2023ರಿಂದ ಅಕ್ಟೋಬರ್ 2024ರ ನಡುವೆ ಒಡಿಶಾದಲ್ಲಿ 5.20 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.
ಈ ಅವಧಿಯಲ್ಲಿ ಬೀದಿ ನಾಯಿಗಳು ಅಥವಾ ಸಾಕು ನಾಯಿಗಳು ಪ್ರತಿ ದಿನ ಸರಾಸರಿ 777 ಮಂದಿ ಮೇಲೆ ದಾಳಿ ನಡೆಸಿವೆ ಎಂಬ ಮಾಹಿತಿ ಈ ದತ್ತಾಂಶಗಳಿಂದ ಬಹಿರಂಗಗೊಂಡಿದೆ.
ರಾಯಗಢ ವಿಧಾನಸಭಾ ಕ್ಷೇತ್ರದ ಶಾಸಕ ಕದ್ರಕಾ ಅಪ್ಪಲ ಸ್ವಾಮಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಗೋಕುಲಾನಂದ ಮಲ್ಲಿಕ್, ಈ 22 ತಿಂಗಳ ಅವಧಿಯಲ್ಲಿ ಒಟ್ಟು 5,20,237 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
2023ರಲ್ಲಿ 2,59,107 ಪ್ರಕರಣಗಳು ವರದಿಯಾಗಿದ್ದರೆ, 2024 ಜನವರಿಯಿಂದ ಅಕ್ಟೋಬರ್ ವರೆಗೆ 2,43,565 ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದರು.
2024ರ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಇಂತಹ ಪ್ರಕರಣಗಳು ಅತ್ಯಧಿಕ ಪ್ರಮಾಣದಲ್ಲಿ ವರದಿಯಾಗಿದ್ದು, ಕ್ರಮವಾಗಿ 33,547, 32,561 ಹಾಗೂ 29,801 ಪ್ರಕರಣಗಳು ವರದಿಯಾಗಿವೆ ಎಂದೂ ಅವರು ಮಾಹಿತಿ ನೀಡಿದರು.
2019ರ ಜಾನುವಾರು ಗಣತಿಯ ಪ್ರಕಾರ, ಒಡಿಶಾದಲ್ಲಿ 17.34 ಲಕ್ಷ ಬೀದಿ ನಾಯಿಗಳಿವೆ.
ಪ್ರಾಣಿಗಳ ಜನನ ಸಂಖ್ಯೆ ನಿಯಂತ್ರಣ ನಿಯಮ, 2023ರ ಅನ್ವಯ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಯೋಜನೆ ಮಾನ್ಯತಾ ಪ್ರಮಾಣಪತ್ರಗಳನ್ನು ಪಡೆದಿರುವ ಸಂಸ್ಥೆಗಳ ಮೂಲಕ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
2022-23ನೇ ಹಣಕಾಸು ವರ್ಷದಲ್ಲಿ ಒಡಿಶಾದ ಎಂಟು ಪಟ್ಟಣ ಪ್ರದೇಶಗಳಲ್ಲಿ 4,605 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದೂ ಅವರು ವಿಧಾನಸಭೆಗೆ ಮಾಹಿತಿ ನೀಡಿದರು.