ಬಿಜೆಪಿ, ಆರೆಸ್ಸೆಸ್ ಸಂವಿಧಾನವನ್ನು ನಾಶ ಮಾಡುತ್ತಿವೆ : ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಉತ್ತರ ಪ್ರದೇಶದ ಸಂಭಲ್‌ನಲ್ಲಿ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾಗಲು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಅವಕಾಶ ನೀಡದ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ನಾಶಗೊಳಿಸುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಆರೋಪಿಸಿದ್ದಾರೆ.
‘ಬಿಜೆಪಿ-ಆರೆಸ್ಸೆಸ್ ತಮ್ಮ ವಿಭಜಕ ಕಾರ್ಯಸೂಚಿಯೊಂದಿಗೆ ಸಂವಿಧಾನವನ್ನು ಚೂರುಚೂರಾಗಿಸುವಲ್ಲಿ ವ್ಯಸ್ತವಾಗಿವೆ. ಸಂಭಲ್‌ನಲ್ಲಿಯ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗದಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ತಡೆದಿರುವುದು ಇದನ್ನೇ ಸಾಬೀತುಗೊಳಿಸಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಖರ್ಗೆ, ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುವುದು ಬಿಜೆಪಿ-ಆರೆಸ್ಸೆಸ್‌ನ ಏಕೈಕ ಸಿದ್ಧಾಂತವಾಗಿದೆ. ಇದಕ್ಕಾಗಿ ಅವರು ಸಂವಿಧಾನವು ಅಂಗೀಕರಿಸಿರುವ ಪೂಜಾಸ್ಥಳಗಳ ಕಾಯ್ದೆಯನ್ನು ಹರಿದು ಹಾಕಿದ್ದು ಮಾತ್ರವಲ್ಲ, ಅವರೀಗ ಎಲ್ಲೆಡೆ ತಮ್ಮ ದ್ವೇಷದ ಮಾರುಕಟ್ಟೆಗಳ ಶಾಖೆಗಳನ್ನು ಆರಂಭಿಸಲು ಪಟ್ಟು ಹಿಡಿದು ಪ್ರಯತ್ನಿಸುತ್ತಿದ್ದಾರೆ ’ಎಂದಿದ್ದಾರೆ.
‘ಕಾಂಗ್ರೆಸ್ ಸಾಮರಸ್ಯ, ಶಾಂತಿ, ಭ್ರಾತ್ವತ್ವ, ಸೌಹಾರ್ದ ಮತ್ತು ಪ್ರೀತಿಯನ್ನು ಹರಡಲು ತನ್ನ ಅಂಗಡಿಯನ್ನು ತೆರೆಯುವುದನ್ನು ಮುಂದುವರಿಸುತ್ತದೆ ಹಾಗೂ ವಿವಿಧತೆಯಲ್ಲಿ ಏಕತೆಗೆ ಅನುಗುಣವಾಗಿ ಸಮಾಜವನ್ನು ಒಂದಾಗಿರಿಸಲು ನೆರವಾಗಲಿದೆ. ನಾವು ತಲೆ ಬಾಗುವುದಿಲ್ಲ, ನಾವು ಹಿಂದಕ್ಕೆ ಸರಿಯುವುದಿಲ್ಲ’ ಎಂದೂ ಖರ್ಗೆ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.