117 ಕೋಟಿ ರೂ. ಸೈಬರ್ ವಂಚನೆ ಪ್ರಕರಣ | ದಿಲ್ಲಿ-ಎನ್ಸಿಆರ್ ನಲ್ಲಿ ಸಿಬಿಐನಿಂದ ಶೋಧ

Update: 2024-12-04 16:02 GMT

ಸಾಂದರ್ಭಿಕ ಚಿತ್ರ | PC : NDTV 

ಹೊಸದಿಲ್ಲಿ: 117 ಕೋಟಿ ರೂ. ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಹತ್ತು ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ಶೋಧ ಕಾರ್ಯಾಚರಣೆ ನಡೆಸಿತು ಎಂದು ಸಿಬಿಐ ಅಧಿಕಾರಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಸಮನ್ವಯ ಕೇಂದ್ರದ ದೂರನ್ನು ಆಧರಿಸಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಸಿಬಿಐ ಈ ಶೋಧ ಕಾರ್ಯಾಚರಣೆ ನಡೆಸಿದೆ.

ದೇಶಾದ್ಯಂತ ನಡೆಯುತ್ತಿರುವ ವ್ಯವಸ್ಥಿತ ಹಣಕಾಸು ವಂಚನೆಯಲ್ಲಿ ಅಪರಿಚಿತ ಸಂಘಟಿತ ಸೈಬರ್ ಅಪರಾಧಿಗಳು ಹಾಗೂ ವಿದೇಶಿ ನಟರು ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಆರೋಪಿಸಲಾಗಿದೆ.

“ವಿದೇಶಗಳಿಂದ ಕಾರ್ಯಾಚರಿಸುತ್ತಿರುವ ವಂಚಕರು, ಭಾರತದಲ್ಲಿನ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ಅಂತರ್ಜಾಲ ತಾಣಗಳು, ವಾಟ್ಸ್ ಆ್ಯಪ್ ಹಾಗೂ ಟೆಲಿಗ್ರಾಮ್ ನಂತಹ ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಾರೆ ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ” ಎಂದು ಸಿಬಿಐ ವಕ್ತಾರರನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.

“ಅವರು ಅರೆಕಾಲಿಕ ಉದ್ಯೋಗಗಳ ಹಗರಣ, ಗುರಿ ಆಧಾರಿತ ವಂಚನೆಗಳು ಹಾಗೂ ಪ್ರಾಥಮಿಕ ಹೂಡಿಕೆಗೆ ಅತ್ಯಧಿಕ ಪ್ರಮಾಣದ ಪಾವತಿಯ ಭರವಸೆಗಳ ಆಮಿಷವನ್ನು ಜನರಿಗೆ ಒಡ್ಡುತ್ತಿದ್ದಾರೆ. ಸಂತ್ರಸ್ತರು ಹೂಡಿಕೆ ಮಾಡುವ ನಿಧಿಯನ್ನು ತಮ್ಮ ಮೂಲ ಸ್ಥಳವನ್ನು ಮರೆ ಮಾಚಲು ತಕ್ಷಣವೇ ನಕಲಿ ಖಾತೆಗಳಿಗೆ ವರ್ಗಾಯಿಸುತ್ತಿದ್ದಾರೆ” ಎಂದೂ ವರದಿಯಲ್ಲಿ ಹೇಳಲಾಗಿದೆ.

ಬುಧವಾರ ನಡೆಸಲಾದ ಶೋಧ ಕಾರ್ಯಾಚರಣೆಯಲ್ಲಿ ಗುರುಗ್ರಾಮದ ಎರಡು ಸ್ಥಳಗಳು ಹಾಗೂ ದಿಲ್ಲಿಯ ಎಂಟು ಸ್ಥಳಗಳಲ್ಲಿ ಈ ವಂಚನೆಯಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಿದ್ಯುನ್ಮಾನ ಸಾಧನಗಳು ಹಾಗೂ ಹಣಕಾಸು ದಾಖಲೆಗಳಲ್ಲಿ ದೋಷಾರೋಪಕ್ಕೆ ಪೂರಕವಾಗುವಂತಹ ಸಾಕ್ಷ್ಯಾಧಾರಗಳಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ.

ಇದಕ್ಕೂ ಮುನ್ನ, ಸೆಪ್ಟೆಂಬರ್ ತಿಂಗಳಲ್ಲಿ ಪುಣೆ, ಹೈದರಾಬಾದ್, ಅಹಮದಾಬಾದ್ ಹಾಗೂ ವಿಶಾಖಪಟ್ಟಣಂ ಸೇರಿದಂತೆ ದೇಶಾದ್ಯಂತ 32 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಸಿಬಿಐ, ಆನ್ ಲೈನ್ ವಂಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸುಮಾರು 170 ಮಂದಿಯನ್ನು ಪತ್ತೆ ಹಚ್ಚಿತ್ತು. ಈ ಪೈಕಿ 26 ಮಂದಿ ಆರೋಪಿಗಳನ್ನು ಸಿಬಿಐ ಬಂಧಿಸಿತ್ತು. ಸಿಬಿಐನಿಂದ ಬಂಧನಕ್ಕೊಳಗಾದವರ ಪೈಕಿ ಪುಣೆಯ 10 ಮಂದಿ, ಹೈದರಾಬಾದ್ ನ 5 ಮಂದಿ ಹಾಗೂ ವಿಶಾಖಪಟ್ಟಣಂನ 11 ಮಂದಿ ಆರೋಪಿಗಳು ಸೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News