ಸಂಭಲ್ ಪ್ರಕರಣ | ಆರೋಪಿಗಳ ಭೇಟಿಗೆ ಎಸ್‌ಪಿ ನಾಯಕರಿಗೆ ಅವಕಾಶ ; ಕಾರಾಗೃಹದ ಇಬ್ಬರು ಅಧಿಕಾರಿಗಳ ಅಮಾನತು
ಲಕ್ನೋ : ಸಂಭಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿತರಾಗಿರುವ 30 ಮಂದಿಯಲ್ಲಿ ಕೆಲವರನ್ನು ಭೇಟಿಯಾಗಲು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಿಯೋಗಕ್ಕೆ ಅವಕಾಶ ನೀಡಿದ ಬಳಿಕ ಮೊರದಾಬಾದ್ ಜೈಲಿನ ಇಬ್ಬರು ಅಧಿಕಾರಿಗಳನ್ನು ಉತ್ತರಪ್ರದೇಶ ಸರಕಾರ ಮಂಗಳವಾರ ಅಮಾನತುಗೊಳಿಸಿದೆ.
ಅಮಾನತುಗೊಂಡ ಅಧಿಕಾರಿಗಳೆಂದರೆ ಜೈಲರ್ ವಿಕ್ರಮ್ ಯಾದವ್ ಹಾಗೂ ಉಪ ಜೈಲರ್ ಪ್ರವೀಣ ಸಿಂಗ್ ಎಂದು ಕಾರಾಗೃಹ ಆಡಳಿತ ಹಾಗೂ ಸುಧಾರಣೆ ಸೇವೆಗಳ ಪ್ರಧಾನ ನಿರ್ದೇಶಕ ಪಿ.ವಿ. ರಾಮಶಾಸ್ತ್ರಿ ಹೇಳಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರಕಾರಕ್ಕೆ ಬರೆದ ಪತ್ರದಲ್ಲಿ ಮೊರದಾಬಾದ್ ಕಾರಾಗೃಹದ ಹಿರಿಯ ಅಧೀಕ್ಷಕ ಪವನ್ ಪ್ರತಾಪ್ ಸಿಂಗ್ ವಿರುದ್ಧ ಕೂಡ ಕ್ರಮ ಕೈಗೊಳ್ಳಲು ಕೂಡ ರಾಜ್ಯ ಕಾರಾಗೃಹ ಇಲಾಖೆ ಶಿಫಾರಸು ಮಾಡಿದೆ.
ಚಂದೌಸಿಯಲ್ಲಿ ಹಿಂದೂ ದೇವಾಲಯದ ಸ್ಥಳದಲ್ಲಿ ಶಾಹಿ ಜಾಮಾ ಮಸೀದಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಆದೇಶ ನೀಡಿತ್ತು. ಈ ಆದೇಶವನ್ನು ವಿರೋಧಿಸಿ ಗುಂಪೊಂದು ಪ್ರತಿಭಟನೆ ನಡೆಸಿದ ಬಳಿಕ ನವೆಂಬರ್ 24ರಂದು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ 5 ಮಂದಿ ಮೃತಪಟ್ಟಿದ್ದರು.