ಜಮ್ಮು-ಕಾಶ್ಮೀರ | ಶಂಕಿತ ಉಗ್ರರಿಂದ ಸೇನಾ ಠಾಣೆ ಮೇಲೆ ಗ್ರೆನೇಡ್ ದಾಳಿ
ಜಮ್ಮು : ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ಸೇನಾ ಠಾಣೆಯ ಮೇಲೆ ಶಂಕಿತ ಭಯೋತ್ಪಾದಕರು ಎರಡು ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಅದರಲ್ಲಿ ಒಂದು ಮಾತ್ರ ಸ್ಫೋಟಗೊಂಡಿದೆ.
ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಶಂಕಿತ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಾನ್‌ಕೋಟೆ ಪ್ರದೇಶದಲ್ಲಿರುವ ಸೇನಾ ಶಿಬಿರದ ಹಿಂದಿರುವ ಸೇನಾ ಠಾಣೆ ಮೇಲೆ ಶಂಕಿತ ಭಯೋತ್ಪಾದಕರು ಗ್ರೆನೇಡ್ ಎಸೆದರು. ಅದರಲ್ಲಿ ಒಂದು ಸ್ಪೋಟಗೊಂಡಿತು. ಇನ್ನೊಂದು ಸ್ಫೋಟಗೊಳ್ಳಲಿಲ್ಲ. ಅದನ್ನು ಅನಂತರ ಶೋಧ ಕಾಯಾಚರಣೆ ಸಂದರ್ಭ ತಜ್ಞರು ನಿಷ್ಕ್ರಿಯಗೊಳಿಸಿದರು ಎಂದು ಅವರು ಹೇಳಿದ್ದಾರೆ.
ಸ್ಪೋಟಗೊಂಡ ಗ್ರೆನೇಡ್‌ನ ಸುರಕ್ಷಾ ಪಿನ್ ಸೇನಾ ಶಿಬಿರದ ಆವರಣ ಗೋಡೆಯ ಸಮೀಪ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯ ನಂತರ ಪರಾರಿಯಾಗಿರುವ ಶಂಕಿತ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಈ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಅಧಿಕಾರಿಗಳು ಹೇಳಿದ್ದಾರೆ.